Advertisement

ಸಚಿವ ತಮ್ಮಣ್ಣಗೆ ಟ್ವೀಟ್‌ ಮೂಲಕ ಸಿಎಂ ಬುದ್ದಿವಾದ

11:03 PM Jun 09, 2019 | Team Udayavani |

ಬೆಂಗಳೂರು: ಮದ್ದೂರಿನಲ್ಲಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಮ್ಮ ಬಳಿ ಸಹಾಯ ಕೇಳಲು ಬಂದ ಸಾರ್ವಜನಿಕರಿಗೆ ನಿಂದಿಸಿರುವುದಕ್ಕೆ ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್‌ ಮೂಲಕ ಬುದ್ಧಿವಾದ ಹೇಳಿದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ತಮ್ಮಣ್ಣ ಅಸಮಾಧಾನ ಹೊರ ಹಾಕಿದ್ದರು. ಕಳೆದ ಶನಿವಾರ ಸಚಿವ ಡಿ.ಸಿ. ತಮ್ಮಣ್ಣ ಅವರ ಬಳಿ ಸಾರ್ವಜನಿಕರು ತಮ್ಮ ಗ್ರಾಮದಲ್ಲಿ ಆಗದಿರುವ ಕೆಲಸದ ಬಗ್ಗೆ ಗಮನಕ್ಕೆ ತರಲು ಮುಂದಾದಾಗ ಸಚಿವರು,

“ಮತ ಅವರಿಗೆ ಹಾಕಿ ಈಗ ಕೆಲಸ ಕೇಳಲು ನಮ್ಮ ಬಳಿ ಬರುತ್ತೀರಾ’ ಎಂದು ಖಾರವಾಗಿ ಮಾತನಾಡಿದ್ದರು. ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಮಂಡ್ಯ ಸಂಸದೆ ಸುಮಲತಾ ಕೂಡ ಆಕ್ಷೇಪ ವ್ಯಕ್ತಪಡಿಸಿ, ವಿಧಾನಸಭೆ ಚುನಾವಣೆಯಲ್ಲಿ ಅದೇ ಜನರು ತಮ್ಮಣ್ಣ ಅವರಿಗೆ ಮತ ನೀಡಿ ಗೆಲ್ಲಿಸಿ ಕಳುಹಿಸಿದ್ದಾರೆ ಎಂದು ಹೇಳಿದ್ದರು.

ಈ ಬೆಳವಣಿಗೆಯನ್ನು ಗಮನಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, “ಚುನಾವಣೆ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಬೆರೆಸುವುದು ಸೂಕ್ತವಲ್ಲ. ಜನಪ್ರತಿನಿಧಿಗಳಾದ ಹಾಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವ ನಾವೆಲ್ಲರೂ, ಪಕ್ಷಾತೀತವಾಗಿ ಜನರ ರಾಜಕೀಯ ಒಲವನ್ನು ಪರಿಗಣಿಸದೇ ಒಟ್ಟಾಗಿ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. ಇದೇ ಪ್ರಜಾಪ್ರಭುತ್ವದ ಸತ್ವ-ಸಾರ’ ಎಂದು ಟ್ವೀಟ್‌ ಮೂಲಕ ಪರೋಕ್ಷವಾಗಿ ಬುದ್ಧಿವಾದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next