Advertisement

ಕರ್ತವ್ಯನಿರತ ಶಿಕ್ಷಕರ ಸಾವು ಇಡೀ ನಾಡಿಗಾದ ನಷ್ಟ: ಸಚಿವ ಸುರೇಶ್ ಕುಮಾರ್

03:14 PM May 27, 2021 | Team Udayavani |

ಬೆಂಗಳೂರು: ಸಾರ್ವಜನಿಕ ಬದುಕನ್ನು ತಲ್ಲಣಗೊಳಿಸಿರುವ ಕೋವಿಡ್ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ನೌಕರಿಯ ಆದೇಶಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ವಿತರಿಸಿದರು.

Advertisement

ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ  ಸರಳ ಸಮಾರಂಭದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಶಿಕ್ಷಕರ 130 ಮಂದಿ ಹತ್ತಿರದ ರಕ್ತ ಸಂಬಂಧಿಗಳಿಗೆ ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೋವಿಡ್ ಸೋಂಕಿನಿಂದ ನಮ್ಮ ಶಿಕ್ಷಣ ಪರಿವಾರದ ಅನೇಕ ಮಂದಿ ಶಿಕ್ಷಕ ಬಂಧುಗಳು ನಮ್ಮನ್ನು ಅಗಲಿದ್ದು, ನಮ್ಮ ನಾಡಿಗೆ ಇದರಿಂದ ಅಪಾರ ನಷ್ಟವಾಗಿದೆ. ಮೃತ ಶಿಕ್ಷಕರ ಕುಟುಂಬಗಳಷ್ಟೇ ಅಲ್ಲ  ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಹಾಗೂ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿ ನೀಡಲು ಇಲಾಖೆ ಮುಂದಾಗಿದೆ ಎಂದರು.

ದುಡಿಯುವ ಕೈಗಳನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಕುಟುಂಬಗಳಿಗೆ ಈ ನೇಮಕಾತಿ ಆದೇಶಗಳು ಆಸರೆಯಾಗಲಿದ್ದು, ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ.  ಇಂತಹ ಸಂಕಷ್ಟದ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮೃತ ಶಿಕ್ಷಕ ಬಂಧುಗಳ ಕುಟುಂಬಗಳ ನೆರವಿಗೆ ಮುಂದಾಗುವುದು ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಇದನ್ನೂ ಓದಿ:ಗ್ಯಾಂಗ್ ಸ್ಟರ್ ಕಾಲಾ ಜತೇದಿ ಸಹೋದರನ ಜೊತೆ ಕುಸ್ತಿಪಟು ಸುಶೀಲ್ ಕುಮಾರ್!

Advertisement

ತಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬದ ಸದಸ್ಯರು ತಮಗೆ ನೀಡಿರುವ ಅನುಕಂಪದ ನೌಕರಿಯ ಆದೇಶಗಳನ್ನು ಪಡೆದುಕೊಂಡು ಸೇವೆಗೆ ಸೇರ್ಪಡೆಯಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡು ಕುಟುಂಬವನ್ನು ಸಮಾಧಾನದಿಂದ ಪೊರೆಯುವ ಮೂಲಕ ನೋವನ್ನು ಭರಿಸುವ  ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.

ನೇಮಕಾತಿ ಪತ್ರ ಪಡೆದು ನೌಕರಿಗೆ ಸೇರ್ಪಡೆಯಾಗುತ್ತಿರುವವರಿಗೆ ಪರಿಣಾಮಕಾರಿ ವೃತ್ತಿ ತರಬೇತಿ ಮತ್ತು ಆಡಳಿತ ವ್ಯವಸ್ಥೆ ಕುರಿತ ಪರಿಚಯಾತ್ಮಕ ತರಬೇತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸಲಹೆ ನೀಡಿದರು.

ಪ್ರಸ್ತುತ ವಿಷಮ ಕಾಲಘಟ್ಟದಿಂದಾಗಿ ಲಾಕ್-ಡೌನ್ ಇದ್ದರೂ ನಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮೃತ ಶಿಕ್ಷಕರ ಕುಟುಂಬಗಳು ಶ್ರಮವಹಿಸಿ ಅನುಕಂಪದ ನೇಮಕಾತಿ ಕಡತಗಳನ್ನು ವಿಲೇವಾರಿ ಮಾಡಿ ನೇಮಕಾತಿ ಆದೇಶ ನೀಡಲು ಮುಂದಾಗಿರುವುದು ಸಂತಸದ ಸಂಗತಿಯಾಗಿದೆ  ಎಂದು ನೇಮಕಾತಿ ಪತ್ರ ನೀಡಲು ಸಹಕರಿಸಿದ ಇಲಾಖೆಯ ಆಯುಕ್ತರು ಸೇರಿದಂತೆ ಎಲ್ಲ ಅಧಿಕಾರಿ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಚಿವರು ಪ್ರಶಂಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next