Advertisement

ಆಮ್ಲಜನಕ ಸರಬರಾಜಿನಲ್ಲಿ ವ್ಯತ್ಯಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ: ಸುರೇಶ್ ಕುಮಾರ್

01:15 PM May 03, 2021 | Team Udayavani |

ಬೆಂಗಳೂರು: ಚಾಮರಾಜನಗರ ಜಿಲ್ಲೆಗೆ ಪೂರೈಕೆಯಾಗಬೇಕಾದ ನಿಗದಿತ ಪ್ರಮಾಣದ ಆಮ್ಲಜನಕ ಸಕಾಲಕ್ಕೆ ಜಿಲ್ಲೆಗೆ ಪೂರೈಕೆಯಾಗುವಲ್ಲಿ  ವ್ಯತ್ಯಯವಾದ ಪ್ರಕರಣ ಕುರಿತು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಇಂದು  ರಾಜ್ಯದ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ರಾಜ್ಯ ಆಮ್ಲಜನಕ ಪೂರೈಕೆ ಉಸ್ತುವಾರಿ ಅಧಿಕಾರಿ ಡಿಐಜಿ ಪ್ರತಾಪ ರೆಡ್ಡಿಯವರೊಂದಿಗೆ ಸಭೆ ನಡೆಸಿದ್ದು, ಜಿಲ್ಲೆಗೆ ಪೂರೈಕೆಯಾಗಬೇಕಾದ ನಿಗದಿತ ಪ್ರಮಾಣದ ಆಮ್ಲಜನಕ ಯಾವುದೇ ವ್ಯತ್ಯಯವಾಗದಂತೆ  ಸಕಾಲದಲ್ಲಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ ಎಂದರು.

ಇದನ್ನೂ ಓದಿ:ಇದು ಸಾವೋ ಅಥವಾ ಕೊಲೆಯೋ : ಚಾಮರಾಜನಗರ ಘಟನೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ

ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯಲ್ಲಿನ ಗೊಂದಲವನ್ನು ಈ ತಕ್ಷಣವೇ ಪರಿಹರಿಸಿ ಸುಲಲಿತ ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಕಾರ್ಯದರ್ಶಿ ಭರವಸೆ ನೀಡಿದ್ದಾರೆಂದು ಸುರೇಶ್ ಕುಮಾರ್  ತಿಳಿಸಿದರು.

ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ ಎಲ್ಲ 23 ಸಾವುಗಳು ಆಮ್ಲಜನಕದ ಕೊರತೆಯಿಂದಲೇ ಆಗಿಲ್ಲ. ಆದರೆ ನಿನ್ನೆ ರಾತ್ರಿ 12.30ರಿಂದ ನಸುಕಿನ 2.30ರ ಮಧ್ಯೆ ಮಾತ್ರ ಆಮ್ಲಜನಕ ಕೊರತೆ ಕಂಡುಬಂದಿದೆ. ಈ ಎಲ್ಲ 23 ಸಾವುಗಳು ನಿನ್ನೆ ಬೆಳಗ್ಗೆ 8.30ರಿಂದ ಇಂದು ಬೆಳಗ್ಗೆಯವರೆಗೆ ಸಂಭವಿಸಿವೆ. ಈ ಎಲ್ಲ ಸಾವುಗಳು ಆಮ್ಲಜನಕ ಕೊರತೆಯಿಂದಲೇ ಸಂಭವಿಸಿದ್ದಾಗಿಲ್ಲ ಎಂದು  ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಅವರು ಹೇಳಿದರು.

Advertisement

ಇಂದೇ ಭೇಟಿ: ಈ ತಕ್ಷಣದಲ್ಲೇ ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದು, ನಿನ್ನೆಯಿಂದ ಸಂಭವಿಸಿದ ಎಲ್ಲ 23 ಸಾವುಗಳ ಕುರಿತು ವಿವರವಾದ ವರದಿಯನ್ನು ಗಮನಿಸಿ ಇದರಲ್ಲಿ ಆಮ್ಲಜನಕದ ಕೊರತೆಯಿಂದಲೇ ಎಷ್ಟು ಸಂಭವಿಸಿವೆ ಎಂಬ ಕುರಿತು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರ ದುರಂತ: ಮಧ್ಯರಾತ್ರಿ ಮನೆಗೆ ಹೋಗಿ ಕರೆದರೂ ಆಸ್ಪತ್ರೆಗೆ ಬರಲಿಲ್ಲ ಡಿಸಿ!

ಬಹುತೇಕ ಮಂದಿ ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಇನ್ನೇನು ಕೊನೆಯ ಹಂತದಲ್ಲಿರುವಾಗ ಬಹಳಷ್ಟು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ನಾವು ಪ್ರತಿಯೊಬ್ಬರನ್ನೂ ಉಳಿಸುವ ಗುರಿ ಹೊಂದಿದ್ದೇವೆ. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಆಸ್ಪತ್ರೆಗೆ ಬಂದವರೇ ಹೆಚ್ಚಿನ ಮಂದಿ ಸಾವನ್ನಪ್ಪಿರುವ ನಿದರ್ಶನಗಳಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ತೀವ್ರ ಆಘಾತದ ಸಂಗತಿ: ಈ 23 ಸಾವುಗಳು ಸಂಭವಿಸಿದ್ದು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಇದು ಸಂಖ್ಯೆಯ ಪ್ರಶ್ನೆಯಲ್ಲ. ಆ ಮನೆಯವರಿಗೆ ಆದ ಅಪಾರ ಸಂಕಷ್ಟ, ನಷ್ಟವನ್ನು ಯಾರಾದರೂ ತುಂಬಿಕೊಡಲಾದೀತೇ ಎಂದು ನೋವು ವ್ಯಕ್ತಪಡಿಸಿದ  ಸುರೇಶ್ ಕುಮಾರ್, ನಿನ್ನೆ ರಾತ್ರಿ ಈ ಸುದ್ದಿ ತಿಳಿದ ತಕ್ಷಣವೇ ನಾನು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯ ಗೊಂದಲ ನಿವಾರಿಸಿದ್ದಾಗಿ ತಿಳಿಸಿದರು.

ಮೈಸೂರಿನಲ್ಲಿ ಸ್ಥಗಿತವಾದ ಆಕ್ಸಿಜನ್ ಪ್ಲಾಂಟ್ ದುರಸ್ತಿಗೆ ಕ್ರಮ: ಮೈಸೂರಿನಿಂದ ಪೂರೈಕೆಯಾಗಬೇಕಾದ ಆಮ್ಲಜನಕದ ಸರಬರಾಜಿನಲ್ಲಿ ಕೊನೆಗಳಿಗೆಯಲ್ಲಿ ಏನಾದರೂ ವ್ಯತ್ಯಯವುಂಟಾಗಿದೆಯೇ ಎಂಬ ಕುರಿತೂ ನಾನು ಚಾಮರಾಜನಗರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಈ ವ್ಯತ್ಯಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗ್ಗೆ ಎರಡು ದಿನಗಳ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿ ಆಮ್ಲಜನಕ ಪೂರೈಕೆ ವ್ಯವಸ್ಥೆ, ಅಗತ್ಯ ಔಷಧಿ, ರೆಮಿಡಿಸಿವರ್ ಚುಚ್ಚುಮದ್ದು ಸೇರಿಂತೆ ರೋಗಿಗಳ ಶುಶ್ರೂಷೆ ಕುರಿತು ಜಿಲ್ಲೆಯ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದ್ದೆ. ಆದಾಗ್ಯೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವುಂಟಾದ ವಿಷಯ ಗೊತ್ತಾದ ತಕ್ಷಣವೇ ಆಮ್ಲಜನಕ ಪೂರೈಕೆ ಸರಿಪಡಿಸಲಾಯಿತು ಎಂದು ಸಚಿವರು ವಿವರಿಸಿದರು.

ಮೈಸೂರಿನಲ್ಲಿರುವ ಸ್ಥಗಿತವಾಗಿರುವ ಆಮ್ಲಜನಕ ಪ್ಲಾಂಟ್ ದುರಸ್ತಿ ಪಡಿಸಲು ಅನುಮತಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಳನ್ನು ಕೋರಲಾಗಿದ್ದು, ಅಗತ್ಯ ಅನುಮತಿ ಪಡೆದು ಅಲ್ಲಿಂದ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆ ಮಾಡಿಕೊಳ್ಳಲು ಅತಿ ಶೀಘ್ರದಲ್ಲಿ ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next