ಚಾಮರಾಜನಗರ: ಕೋವಿಡ್ -19 ಸೋಂಕು ಆತಂಕದ ನಡುವೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ಸಮಾಧಾನದಲ್ಲಿರುವ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆ ಬರೆದು ಮುಗಿಸಿದ ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ್ದಾರೆ. ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿರುವ ಸಚಿವರು ವಿದ್ಯಾರ್ಥಿ ವಲಯದಲ್ಲಿ ಹೊಸ ಹುರುಪು ಮೂಡಿಸಿದ್ದಾರೆ.
ಚಾಮರಾಜನಗರದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಗೌರಿ ಎಂಬಾಕೆಗೆ ಸಚಿವರು ಕರೆ ಮಾಡಿದ್ದಾರೆ.
ಗೌರಿಯ ಪೋಷಕರು ಈ ಮೊದಲು ಕೋವಿಡ್ ಭೀತಿಯ ನಡುವೆ ಪರೀಕ್ಷೆ ನಡೆಸಬಾರದು. ಈಗ ಪರೀಕ್ಷೆಯನ್ನು ಮುಂದೂಡಬೇಕು ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಸಚಿವರು ಅಂದೇ ಕರೆಮಾಡಿ ವಿದ್ಯಾರ್ಥಿಯ ದುಗುಡ ದೂರಮಾಡಿ ಧೈರ್ಯ ಹೇಳಿದ್ದರು.
ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದ ನಂತರ ಶುಕ್ರವಾರ ರಾತ್ರಿ ಕರೆ ಮಾಡಿ ಪರೀಕ್ಷೆ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಈಗ ನಿನ್ನ ಮನಸ್ಸಿನ ಭಾರ ಇಳಿಯಿತಾ? ಮನೆಯಲ್ಲಿ ರಾತ್ರಿ ಊಟಕ್ಕೆ ಪಾಯಸ ಮಾಡಿದ್ದಾರಾ? ನಮ್ಮ ಮನೆಯಲ್ಲಿ ಪಾಯಸ ಮಾಡಿದ್ದಾರೆ, ಫೋನ್ ನಲ್ಲೇ ಕಳುಹಿಸಲಾ ಎಂದು ತಮಾಷೆಯಾಗಿ ಮಾತನಾಡಿದರು.
ಮುಂದುವರಿದು, ಪರೀಕ್ಷೆ ಬರೆಯಲು ಧೈರ್ಯ ಬಂತು ತಾನೆ? ವಿಜ್ಞಾನ, ಗಣಿತ ಪರೀಕ್ಷೆಗಳು ಹೇಗಿತ್ತು? ಪರೀಕ್ಷಾ ಕೇಂದ್ರದ ವ್ಯವಸ್ಥೆಗಳು ಹೇಗಿದ್ದವು ಎಂದು ವಿಚಾರಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಬರುತ್ತದೆ. ಆಗ ನೀನೆ ನನಗೆ ಕರೆ ಮಾಡಿ ಹೇಳಬೇಕು. ಈಗ ಯಾವುದೇ ಆತಂಕ ಬೇಡ, ಚೆನ್ನಾಗಿ ನಿದ್ದೆ ಮಾಡು ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
ಪರೀಕ್ಷಾ ಸಮಯದಲ್ಲಿ ಕಲಿತ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಇನ್ನೂ ಮರೆಯಬಾರದು ಎಂದು ಸಲಹೆ ನೀಡಿದ್ದಾರೆ. ನಂತರ ಪೋಷಕರೊಂದಿಗೆ ಮಾತನಾಡಿ, ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿ ನಾವು ಮಾದರಿಯಾಗಿದ್ದೇವೆ. ಬೇರೆ ರಾಜ್ಯಗಳು ನಮ್ಮನ್ನು ಅನುಸರಿಸುವಂತೆ ನಾವು ಮಾಡಿ ತೋರಿಸಿದ್ದೇವೆ. ನಿಮ್ಮ ಮಗಳನ್ನು ನಮ್ಮ ಮಗಳ ರೀತಿ ನೋಡಿಕೊಂಡಿದ್ದೇವೆ. ಮಗಳನ್ನು ಚೆನ್ನಾಗಿ ಬೆಳೆಸಿ, ವಿದ್ಯೆ ಕೊಡಿ ಎಂದು ಹಾರೈಸಿದರು.
ಸಚಿವರಾದವರು ಸಾಮಾನ್ಯರಿಗೂ ನೆನಪಿಸಿಕೊಂಡು ಕರೆ ಮಾಡಿರುವುದರಿಂದ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.