ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ವಿಶೇಷವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದೆ. ಜು.19ರಂದು ಕೋರ್ ವಿಷಯಗಳ ಪರೀಕ್ಷೆ (ಸಮಾಜ ವಿಜ್ಞಾನ, ಗಣಿತ, ವಿಜ್ಞಾನ) ಜು. 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ದಿನ ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಪರೀಕ್ಷೆ ನಡೆಯಲಿದೆ. ಮತ್ತೊಂದು ದಿನ ಭಾಷಾವಾರು ಪರೀಕ್ಷೆ ನಡೆಯಲಿದೆ. ಮಲ್ಟಿಪಲ್ ಚಾಯ್ಸ್ ಮಾದರಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಒಎಂಆರ್ ಶೀಟ್ ನಲ್ಲಿ ಉತ್ತರಿಸಬೇಕು ಎಂದರು.
ಪರೀಕ್ಷೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣಗಳಿದ್ದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಒಂದು ವೇಳೆ ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆಯಲೇಬೇಕು ಎಂದು ಆಶಿಸಿದರೆ ಅವರಿಗೆ ಹತ್ತಿರದ ಕೋವಿಡ್ ಕೇರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿವುದು ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ:ಮಕ್ಕಳ ಜೀವ ಮುಖ್ಯ, ಶಾಲೆ ತೆರೆಯಲು ಅವಸರ ಬೇಡವೆಂದು ಏಮ್ಸ್ ಮುಖ್ಯಸ್ಥರಿಂದ ಸೂಚನೆ: ಸುಧಾಕರ್
ವಿದ್ಯಾರ್ಥಿಗಳಿಗೆ ಸರ್ಜಿಕಲ್ ಮಾಸ್ಕ್ ನೀಡಲಾಗುವುದು. ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ, ಕೋವಿಡ್ ಲಕ್ಷಣ ಹೊಂದಿರುವವರಿಗೆ ಎನ್-95 ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಈ ಬಾರಿಯು ಸ್ಕೌಟ್ಸ್ – ಗೈಡ್ಸ್ ನಮಗೆ ಸಹಾಯ ಮಾಡಲಿದೆ ಎಂದು ಹೇಳಿದರು.
ಕಳೆದ ಬಾರಿ ಒಂದು ಕೊಠಡಿಯಲ್ಲಿ 18 ಮಕ್ಕಳಿಗೆ ಪರೀಕ್ಷೆ ಬರೆಯಲ ಅವಕಾಶ ಕೊಡಲಾಗಿತ್ತು, ಆದರೆ ಈ ಬಾರಿ ಒಂದು ಕೊಠಡಿಯಲ್ಲಿ ಹೆಚ್ಚೆಂದರೆ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದು ಡೆಸ್ಕ್ ನಲ್ಲಿ ಓರ್ವ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.