Advertisement

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

05:35 PM May 09, 2021 | Team Udayavani |

ಬೆಂಗಳೂರು: ನಾಳೆಯಿಂದ ಪ್ರಾರಂಭವಾಗಲಿರುವ ಲಾಕ್ ಡೌನ್‍ನ ಸದುದ್ದೇಶವನ್ನು ಅರ್ಥೈಸಿಕೊಂಡು ಜನತೆ ಸ್ವಯಂ ಪ್ರೇರಿತರಾಗಿ ಸಹಕರಿಸಬೇಕೆಂದು ಸಚಿವ.ಎಸ್.ಸುರೇಶ್ ಕುಮಾರ್ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

Advertisement

ಬೆಂಗಳೂರಿನ ರಾಜಾಜಿನಗರದಲ್ಲಿ ಕೋವಿಡ್ ಸೋಂಕಿತರಿಗೆ ಹೊಸದಾಗಿ ಪ್ರಾರಂಭಿಸಲಾಗಿರುವ ಇಪ್ಪತ್ತು ಆಕ್ಸಿಜನ್ ಪೂರಕ ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸೋಂಕಿನ ಸರಪಳಿಯನ್ನು ತುಂಡರಿಸುವಲ್ಲಿ ಲಾಕ್‌ಡೌನ್ ಗೆ ನಾಗರಿಕರು‌ ಸಹಕರಿಸುವುದು‌ ಅತ್ಯಂತ ಅವಶ್ಯಕವಾಗಿದೆ ಎಂದರು.

ಕೋವಿಡ್ ಸರಪಳಿಯನ್ನು ತುಂಡರಿಸದಿದ್ದಲ್ಲಿ ಸಾರ್ವಜನಿಕ‌ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಹದಗೆಡಲಿದೆ. ಜನತೆ ತಮ್ಮ ಹಾಗೂ ಸಮಾಜದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಉಳಿದು ಸಹಕಾರ ನೀಡಬೇಕು. ಗ್ರಾಮಾಂತರ ಪ್ರದೇಶಗಳ ನಾಗರಿಕರೂ ಲಾಕ್ ಡೌನ್ ಕುರಿತಂತೆ ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಆಕ್ಸಿಜನ್ ಕೋಟಾ: ಜಿಲ್ಲೆಗಳಿಗೆ ಆಕ್ಸಿಜನ್‌ ಪೂರೈಕೆ‌ ಕುರಿತಂತೆ ರಾಜ್ಯ ಸರ್ಕಾರವು ಜಿಲ್ಲಾವಾರು ಕೋಟಾ ನಿಗದಿಪಡಿಸಿದ್ದು, ಇದರಿಂದ ಆಮ್ಲಜನಕ‌ ಹಂಚಿಕೆಯಲ್ಲಿ ಉದ್ಭವಿಸುತ್ತಿದ್ದ ಅನವಶ್ಯಕವಾದ ಗೊಂದಲ, ಸಂಘರ್ಷಗಳು ನಿವಾರಣೆಯಾಗಲಿವೆ. ಹಂಚಿಕೆ‌ ಹೆಚ್ಚು ವೈಜ್ಞಾನಿಕವಾಗಿರಲಿದೆ ಎಂದ ಸಚಿವರು, ಚಾಮರಾಜನಗರಕ್ಕೆ‌ ನಿಗದಿಯಾಗಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಒಂದು ಸಾವಿರ ಲೀಟರ್ ಹಂಚಿಕೆಗೆ ತಾವು ಸರ್ಕಾರವನ್ನು ಕೋರಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.

ಕೋವಿಡ್ ಸೋಂಕಿತರಿಗೆ ಸಹಕಾರ ಕೇಂದ್ರಗಳು:

Advertisement

ರಾಜಾಜಿನಗರ ವಿಧಾನಸಭಾ‌ ಕ್ಷೇತ್ರದ ಕೋವಿಡ್ ಸೋಂಕಿತ ನಾಗರಿಕರ ಉಪಯೋಗಕ್ಕಾಗಿ ತಾವು ಈಗಾಗಲೇ ಸರ್ಕಾರಿ ಯುನಾನಿ‌‌ ಕಾಲೇಜು ಹಾಗೂ ಹೋಮಿಯೋಪತಿ‌ ಕಾಲೇಜುಗಳಲ್ಲಿ‌‌  ಇನ್ನೂರು ಹಾಸಿಗೆಗಳ ಕೋವಿಡ್ ಕೇರ್‌ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಇಂದು‌ ಉದ್ಘಾಟಿಸಿರುವ ಆರೈಕೆ‌ ಕೇಂದ್ರ‌ ಈ ಪ್ರದೇಶದ ಕೋವಿಡ್ ನಿಯಂತ್ರಣಕ್ಕೆ ಅತ್ಯಂತ ಸಹಕಾರಿಯಾಗಲಿದೆ. ರಾಜಾಜಿನಗರದ ಭಾಷ್ಯಂ‌ ವೃತ್ತದ ಬಳಿ ಇರುವ ನಾಗರಾಜ‌ ಸ್ಮಾರಕ‌ ಆಸ್ಪತ್ರೆಯಲ್ಲಿ‌‌ ಇಂದಿನಿಂದ ಇಪ್ಪತ್ತು ಹಾಸಿಗೆಗಳ‌ ವಿಶೇಷ ಆರೈಕೆ‌‌‌‌ ಕೇಂದ್ರವನ್ನು ‌ಪ್ರಾರಂಭಿಸಲಾಗಿದೆ. ಈಗಾಗಲೇ ಕ್ಷೇತ್ರದ ಜನರಿಗಾಗಿ ತಾವು ಪ್ರಾರಂಭಿಸಿರುವ ಉಚಿತ ಆಂಬ್ಯುಲೆನ್ಸ್ ಸೇವೆಯನ್ನೂ ಸಾಕಷ್ಟು ನಾಗರಿಕರು ಬಳಸುತ್ತಿದ್ದಾರೆ. ಉಸಿರಾಟದ‌‌‌ ತೊಂದರೆಗೊಳಗಾಗುವ ಕೋವಿಡ್ ಸೋಂಕಿತರಿಗೆ ಆಮ್ಲಜನಕವನ್ನು ಪೂರೈಸಿ ಅವರಿಗೆ ಅಗತ್ಯ ಶುಶ್ರೂಷೆಯನ್ನು‌ ಒದಗಿಸುವ ಸಲುವಾಗಿ ಮನೆ ಮನೆಗೆ ಆಮ್ಲಜನಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ವಾರಿಯರ್ ಗಳಿಗಾಗಿ ಚೈತನ್ಯ ಕೇಂದ್ರಗಳು‌ ಕಾರ್ಯ ನಿರ್ವಹಿಸುತ್ತಿವೆ. ಕ್ಷೇತ್ರದ ನಾಗರಿಕರು ಸಹ ಸ್ವಯಂಪ್ರೇರಿತರಾಗಿ ಸರ್ಕಾರದ ಲಾಕ್ ಡೌನ್‌ ನಿರ್ಧಾರವನ್ನು ಬೆಂಬಲಿಸಿ, ಕೋವಿಡ್ ನಿರ್ಮೂಲನೆಗೆ ಸಹಕರಿಸಬೇಕೆಂದು‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next