ಬೆಂಗಳೂರು: ಕಾಂಗ್ರೆಸ್ ಸಂಪೂರ್ಣ ಅಧಿಕಾರ, ಬಹುಮತವಿದ್ದರೂ ಐದು ವರ್ಷದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಲಿಲ್ಲ. ಅಂದಿನ ನೀರಾವರಿ ಸಚಿವರಾಗಿದ್ದವರು ಇಂದು ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ. ರಾಜ್ಯದ ಹಿತ ಕಾಪಾಡುವ ಬಗ್ಗೆ ಅವರಿಗೆ ಅನಿಸಲೇ ಇಲ್ಲ. ನಾಲ್ಕು ವರ್ಷಗಳ ಕಾಲ ಅಸಹಾಯಕತೆ ತೋರಿದವರು ಈಗ ಪಾದಯಾತ್ರೆ ಹೊರಟಿದ್ದಾರೆ ಎಂದು ಸಚಿವ ವಿ.ಸುನೀಲ್ ಕುಮಾರ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಪಾದಯಾತ್ರೆಯಲ್ಲಿ ಕೋವಿಡ್ ಜಾಸ್ತಿ ಮಾಡಿಸಿದರು. ಎರಡನೇ ಪಾದಯಾತ್ರೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿಸುತ್ತಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ವಿಚಾರದಲ್ಲಿ ಬಿಜೆಪಿಗೆ ಬದ್ಧತೆಯಿದೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ಮೇಕೆದಾಟು ಯೋಜನಗೆ ಬದ್ಧತೆ ತೋರುತ್ತೇವೆ ಎಂದರು.
ದೂರದೃಷ್ಟಿಯ ನಾಯಕ: ಬೊಮ್ಮಾಯಿ ಅವರ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಎಲ್ಲಾ ಇಲಾಖೆಯಿಂದ ಹೊಸ ಕಾರ್ಯಕ್ರಮ ನೀಡಲು, ಉತ್ತಮ ಸಲಹೆ ನೀಡಲಾಗಿದೆ. ಸಿಎಂ ಬೊಮ್ಮಾಯಿ ಅವರು ದೂರದೃಷ್ಟಿ ಇಟ್ಟುಕೊಂಡಿರುವ ನಾಯಕ. ನಾಡಿನ ಜನರ ಆಸೆ ಈಡೇರಿಸುತ್ತಾರೆ. ಕರ್ನಾಟಕದ ಮುಂದಿನ ಹತ್ತು ವರ್ಷದ ವಿಚಾರ ಗಮನ ಇಟ್ಟುಕೊಂಡು ಬಜೆಟ್ ಮಾಡಲಾಗುತ್ತಿದೆ. ಅನುಭವದ ಆಧಾರದ ಮೇಲೆ ಬಜೆಟ್ ಮಂಡಿಸುತ್ತಾರೆ ಎಂದು ಸುನೀಲ್ ಕುಮಾರ್ ಹೇಳಿದರು.
ಇದನ್ನೂ ಓದಿ:ಪೇಟಿಎಂ ಕ್ಯಾಶ್‌ಬ್ಯಾಕ್ ನೀಡುವುದಾಗಿ ವಂಚನೆ : ಪೇಟಿಎಂ ಮಾಜಿ ಉದ್ಯೋಗಿ ಬಂಧನ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ನಡೆಯುತ್ತಿದೆ. ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಮೂರುವರೆ ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಯುದ್ಧದ ಸಂದರ್ಭದಲ್ಲಿ ಈ ರೀತಿ ಸಾಹಸ ಯಾರೂ ಮಾಡುವುದಿಲ್ಲ. ಆದರೆ ಭಾರತ ಸರ್ಕಾರ ಮಾಡಿದೆ ಎಂದರು.
ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಇರಬೇಕು, ಇದರಲ್ಲಿ ರಾಜಕಾರಣ ಮಾಡಬಾರದು. ಇಂತಹ ಸಂದರ್ಭಗಳಲ್ಲಿ ಕರೆದುಕೊಂಡು ಬರುವ ಸಲಹೆ ನೀಡಬೇಕು. ಸಿದ್ದರಾಮಯ್ಯ ಇತ್ಯಾದಿ ಜನರು ಬೀದಿಯಲ್ಲಿ ಕೂತು ಬಾಯಿಗೆ ಬಂದಂತೆ ಹೇಳೋದಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.