Advertisement

ಚುನಾವಣೆ ವೇಳೆ ಸಮಾಜ ವಿಭಜಿಸುವ ಜೆಡಿಎಸ್‌, ಕಾಂಗ್ರೆಸ್‌: ಸಚಿವ ಸುನಿಲ್‌ ಕುಮಾರ್‌ ಆರೋಪ

11:59 PM Feb 08, 2023 | Team Udayavani |

ಉಡುಪಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಾಜದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಯಾವುದೇ ಚುನಾವಣೆ ಮಾಡಿಲ್ಲ. ಜಾತಿಯ ಆಧಾರದಲ್ಲಿ ಎಲ್ಲ ಚುನಾವಣೆಯಲ್ಲೂ ಸಮಾಜವನ್ನು ವಿಭಜಿಸುವ ಕಾರ್ಯವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಆರೋಪಿಸಿದರು.

Advertisement

ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಫೆ. 11, 12ರಂದು ನಡೆಯಲಿರುವ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನದ ಪೂರ್ವ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲಿದೆ ಎಂಬುದನ್ನು ಎಚ್‌.ಡಿ. ಕುಮಾರಸ್ವಾಮಿಯವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರಕಾರ ಬಂದ ಅನಂತರದಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸಲಿದೆ. ಬ್ರಾಹ್ಮಣರು ಅಥವಾ ಯಾವುದೇ ಜಾತಿಯ ಹೆಸರಿನಲ್ಲಿ ಕೀಳಾಗಿ ಮಾತಾಡುವುದು ಕುಮಾರಸ್ವಾಮಿಯವರಿಗೆ ಶೋಭೆ ತರುವುದಿಲ್ಲ. ಅರ್ಹತೆ ಇದ್ದವರು ಮುಖ್ಯಮಂತ್ರಿ ಆಗುತ್ತಾರೆ. ಜಾತಿ, ಕುಟುಂಬ ಆಧಾರದಲ್ಲಿ ಜೆಡಿಎಸ್‌ ಪಕ್ಷದಿಂದ ಮಾತ್ರ ಮುಖ್ಯಮಂತ್ರಿ ಆಗುತ್ತದೆ. ಬಿಜೆಪಿಯಲ್ಲಿ ಜಾತಿ, ಕುಟುಂಬದ ಆಧಾರವಲ್ಲ, ಪಕ್ಷನಿಷ್ಠೆ ಮತ್ತು ಅನುಭವ ಇದ್ದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ವ್ಯಂಗ್ಯವಾಡಿದರು.

ಉತ್ಸಾಹ ಇದೆ
ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್‌ ಶಾ ಅವರ ದ.ಕ. ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಪುತ್ತೂರಿಗೆ ಹೋಗಿ ಸಮಾವೇಶ ನಡೆಯುವ ಸ್ಥಳ ಪರಿಶೀಲಿಸಲಾಗಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಾಗೂ ಸಹಕಾರಿಗಳ ದೊಡ್ಡ ಸಮ್ಮೇಳನ ನಡೆಯಲಿದೆ. ಶಾ ಆಗಮನದಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ನಾಲ್ಕು ವಿಧಾನಸಭೆ ಕ್ಷೇತ್ರ ಹಾಗೂ ಇಡೀ ಜಿಲ್ಲೆಗೆ ಸೀಮಿತವಾಗಿ ದೊಡ್ಡ ಸಮಾವೇಶ ನಡೆಯುತ್ತಿದ್ದು, ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ. ಅಮಿತ್‌ ಶಾ ಬರುತ್ತಿರುವುದರಿಂದ ತಾನಾಗೀಯ ಚುನಾವಣೆ ರಂಗೇರಲಿದೆ. ಉಭಯ ಜಿಲ್ಲೆಯ ಎಲ್ಲ ಕ್ಷೇತ್ರ ಗೆಲ್ಲಲು ತಯಾರಿ ಮಾಡುತ್ತಿದ್ದೇವೆ ಎಂದರು.

ಪದ್ಧತಿಯಂತೆ ನಡೆಯಲಿದೆ
ಎಸ್ಕಾಂಗಳು ಪ್ರತೀ ವರ್ಷ ಮುಂದಿನ ಯೋಜನೆ ಹಾಗೂ ಬಜೆಟ್‌ ಆಧಾರದಲ್ಲಿ ವಿದ್ಯುತ್‌ ದರದ ನಿಗದಿ ಹೇಗೆ ಮಾಡಬೇಕು ಎಂಬುದರ ಅಭಿಪ್ರಾಯವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದೆ ಇಡಲಿದೆ. ಕೆಇಆರ್‌ಸಿ ಅದಾಲತ್‌ ಮೂಲಕ ಸಾರ್ವಜನಿಕರ ಮುಂದಿಟ್ಟು, ಅವರ ಅಭಿಪ್ರಾಯ ಪಡೆಯಲಿದೆ. ಎಸ್ಕಾಂ ಮತ್ತು ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅನಂತರ ಕೆಇಆರ್‌ಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಶಾಸಕ ಕೆ. ರಘುಪತಿ ಭಟ್‌ ಉಪಸ್ಥಿತರಿದ್ದರು.

Advertisement

ಪ್ರತ್ಯೇಕ ರಾಜ್ಯ ಕೇಳಿಲ್ಲ
ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಕನ್ನಡ ಬಿಟ್ಟು ಬೇರೆ ಯಾವುದೇ ಯೋಚನೆ ಮಾಡಲು ಸಾಧ್ಯವೇ ಇಲ್ಲ. ಕನ್ನಡದ ಎಲ್ಲ ಚಟುವಟಿಕೆ ಹಾಗೂ ಕನ್ನಡಿಗರ ಜತೆಗೆ ತುಳುನಾಡು ಅವಿನಾಭಾವ ಸಂಬಂಧ ಹೊಂದಿದೆ. ನಾವೇನು ಪ್ರತ್ಯೇಕ ತುಳುನಾಡು ಕೇಳುತ್ತಿಲ್ಲ. ತುಳು ಭಾಷೆಗೆ ಎರಡನೇ ಆದ್ಯತೆ ನೀಡುವಂತೆ ಕೇಳಿದ್ದೇವೆ. ಕನ್ನಡಕ್ಕೆ ಮೊದಲ ಆದ್ಯತೆ ಮತ್ತು ಪರಮೋಚ್ಚ ಸ್ಥಾನಮಾನ. ತುಳು ಕನ್ನಡದ್ದೇ ಇನ್ನೊಂದು ಭಾಗವಾಗಿರುವುದರಿಂದ ಪ್ರಸ್ತಾವನೆ ಸರಕಾರದ ಮುಂದಿಟ್ಟಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಆದ್ಯತೆ ಭಾಷೆಯ ಜತೆಗೆ ಬೇರೆ ಬೇರೆ ಭಾಷೆಗೂ ಆದ್ಯತೆ ನೀಡಿದ್ದಾರೆ. ಹೀಗಾಗಿ ಇಲ್ಲಿಯೂ ತುಳು ಭಾಷೆಗೆ ಎರಡನೇ ಆದ್ಯತೆ ನೀಡುವಂತೆ ಅನೇಕರು ಮನವಿ ಸಲ್ಲಿಸಿದ್ದಾರೆ. ಇದರ ಸಾಧಕ-ಬಾಧಕ ಚರ್ಚೆಗೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಆಧಾರದಲ್ಲಿ ಸರಕಾರ ಮುಂದೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸುನಿಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next