ಬೆಂಗಳೂರು: ಕೋವಿಡ್ -19 ಸೋಂಕಿನ ಒಂದು ಅಲೆ 90 ದಿನ ಇರುತ್ತದೆ. ಈ ಅಲೆ ಇನ್ನೂ ನಲವತ್ತು ದಿನ ಇರಲಿದೆ ಅಂತ ತಜ್ಞರು ಹೇಳಿದ್ದಾರೆ. ಅಲ್ಲಿಯವರೆಗೂ ಮನೆಯಲ್ಲೇ ಇರುವುದು ಸೂಕ್ತ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಮಾತನಾಡಿದ ಅವರು, ಕಡ್ಡಾಯ ಮಾಸ್ಕ್, ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಬೇಡ ಎಂದರು.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600ಅಂಕ ಏರಿಕೆ, 14,520ರ ಗಡಿ ತಲುಪಿದ ನಿಫ್ಟಿ
ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಧಾವಿಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆಗೆ ಕಾರಣವಾಗಿದೆ. ಯಾವ ರೋಗದ ಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯಿರಿ. ಹೆಚ್ಚಿನ ಚಿಕಿತ್ಸೆ ಬೇಕಿರುವವರು ಮಾತ್ರ ಆಸ್ಪತ್ರೆಗೆ ಬಂದರೆ ಬಿಕ್ಕಟ್ಟು ಕಡಿಮೆಯಾಗಲಿದೆ ಎಂದರು.
ಅನಗತ್ಯವಾಗಿ ಆಘಾತಕ್ಕೆ ಒಳಗಾಗಬೇಡಿ. ಪಾಸಿಟಿವ್ ಬಂದ ಕೂಡಲೆ ಹೆದರುತ್ತಿದ್ದೀರಿ. ನಾವು ಎರಡನೇ ಅಲೆಯಲ್ಲಿದ್ದೇವೆ, ಬೇರೆ ದೇಶದವರು ನಾಲ್ಕನೇ ಹಂತದಲ್ಲಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.