ವಿಧಾನಪರಿಷತ್ತು: ಸಾರಿಗೆ ನಿಗಮಗಳ ಆಸ್ತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಅಡವಿಟ್ಟು ಅದರಿಂದ ಪಡೆದ ಸಾಲದ ಹಣವನ್ನು ನೌಕರರ ಪಿಂಚಣಿ ಮತ್ತು ಭವಿಷ್ಯ ನಿಧಿ ನೀಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಎಂಟಿಸಿಯಿಂದ ಶಾಂತಿನಗರ ವಾಣಿಜ್ಯ ಕಟ್ಟಡ ಅಡಮಾನ ಇಟ್ಟು ಶೇ.8ರ ಬಡ್ಡಿ ದರದಲ್ಲಿ 390 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮದಲ್ಲಿ 16 ಎಕರೆ ಜಮೀನು ಅಡವಿಟ್ಟು 100 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಶೇ.7.5ರ ಬಡ್ಡಿದರದಲ್ಲಿ 50 ಕೋಟಿ ರೂ. ಸಾಲ ಪಡೆಯಲಾಗಿದೆ. ಈ ಹಣವನ್ನು ಸಿಬ್ಬಂದಿ ಮತ್ತು ನೌಕರರ ಪಿಂಚಣಿ ಮತ್ತು ಭವಿಷ್ಯ ನಿಧಿಗೆ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್
ಕೋವಿಡ್ ಕಾಲದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು. ಸಿಬ್ಬಂದಿ ವೇತನ ಮತ್ತಿತರ ವೆಚ್ಚಗಳಿಗೆ ಸರ್ಕಾರ 2,958 ಕೋಟಿ ರೂ. ಆರ್ಥಿಕ ನೆರವು ನೀಡಿದೆ. ವಾಣಿಜ್ಯದ ದೃಷ್ಟಿ ಯಿಂದ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿಲ್ಲ. ಸೇವಾ ದೃಷ್ಟಿಯಿಂದ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ, ಸಾಲ ಮಾಡಬೇಕಾದ ಸನ್ನಿವೇಶ ಬಂದಿದೆ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟು ಶೀಘ್ರ ಲಾಭದತ್ತ ತರಲು ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಕೋವಿಡ್ ವೇಳೆ ಮರಣ ಹೊಂದಿದವರಿಗೆ ನಿಗದಿಯಂತೆ ಪರಿಹಾರ ನೀಡಲಾಗುತ್ತಿದೆ. ಉಳಿದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಪರಿಹರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.