ಬೆಂಗಳೂರು: ಸಚಿವ ಹಾಗೂ ಗೋವಿಂದರಾಜ ನಗರ ಶಾಸಕ ವಿ.ಸೋಮಣ್ಣ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳೊಂದಿಗೆ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕಾರ್ಯ ಪರಿಶೀಲನೆ ನಡೆಸಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೆಳಗ್ಗೆ 8ಗಂಟೆಗೆ ಕ್ಷೇತ್ರ ಪ್ರದಕ್ಷಿಣೆ ಶುರು ಮಾಡಿದ ಸೋಮಣ್ಣ, ಗೋವಿಂದರಾಜ ನಗರದ ಮಾರೇನಹಳ್ಳಿ ಬಸ್ ನಿಲ್ದಾಣ, ವೈಯಾಲಿಕಾವಲ್ ಲೇಔಟ್ ಚೌಕಿ ಶಂಕು ಸ್ಥಾಪನೆ ನೆರವೇರಿಸಿದರು. ಪಂತರ ಪಾಳ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಗುಂಪು ಮನೆ ಕಾಮಗಾರಿ ಪರೀಶೀಲನೆ ಸಮಯದಲ್ಲಿ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳನ್ನು ತಾರಟೆಗೆ ತೆಗೆದುಕೊಂಡರು.
ನಾಯಂಡಹಳ್ಳಿಯ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಸಚಿವ, ಪ್ರಾರ್ಥನಾ ಮಂದಿರದ ಸುತ್ತ ತುಂಬಿದ್ದ ಕಸ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೂಡಲೆ ಅಲ್ಲಿನ ಕಸ ತೆರವುಗೊಳಿಸುವಂತೆ ಸೂಚನೆ ನೀಡಿದರು. ಕಳೆದ ಮೂರು ತಿಂಗಳುಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಬೆಸ್ಕಾಂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಬಳಿಕ ನಾಗರಬಾವಿಯ ಟೀಚರ್ಸ್ ಕಾಲೋನಿಗೆ ಭೇಟಿ ನೀಡಿ ಹೊಸದಾಗಿ ನಿರ್ಮಾಣವಾಗುತ್ತಿರೋ ಉದ್ಯಾನವನ ಮತ್ತು ಸಾರ್ವಜನಿಕ ಗ್ರಂಥಾಲಯ ಕಾವೇರಿಪುರ ವಾರ್ಡ್ ಆಫಿಸ್, ಗೋವಿಂದರಾಜನಗರ ವಾರ್ಡ್‌ನ ಮೂರು ಅಂತಸ್ತಿನ ಹೆರಿಗೆ ಆಸ್ಪತ್ರೆ ಮತ್ತು ಸರಸ್ವತಿ ನಗರದ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿ ತ್ವರಿತಗೊಳಿಸುವಂತೆ ಹೇಳಿದರು. ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಸಂಬಂಧಪಟ್ಟ ವಾರ್ಡ್‌ನ ಬಿಬಿಎಂಪಿ ಅಧಿಕಾರಿಗಳು ಸಚಿವರ ಜತೆ ಕ್ಷೇತ್ರ ಪ್ರದಕ್ಷಿಣೆ ಮಾಡಿದರು.
ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲೇ ಕ್ಲಾಸ್: ನಿನ್ ಜೀವನದಲ್ಲಿ ಒಂದು ಒಳ್ಳೆ ಕೆಲಸ ಮಾಡಿಲ್ಲ. ಮೂರೂವರೆ ವರ್ಷ ಚೆನ್ನಾಗಿ ತಿಂದ್ಕೊಂಡು ಆರಾಮಾಗಿ ಕಾಲ ಕಳೆಯುತಿದ್ದೀಯ. ಇನ್ನಾದ್ರು ಕೆಲಸ ಮಾಡು. ಇಲ್ಲಿ ರಾತ್ರಿ ವೇಳೆ ರೌಡಿಗಳ, ಕಳ್ಳರ ಕಾಟ ಹೆಚ್ಚಾಗಿದೆ ಅಂತ ಜನ ದೂರು ಹೇಳ್ತಿದ್ದಾರೆ. ಒಂದು ಸಾರಿಯಾದ್ರೂ ಇಲ್ಲಿಗೆ ಬಂದು ನೋಡಿದ್ದೀಯಾ..? ರೌಡಿಗಳು ಮಚ್ಚು ಹಿಡ್ಕೊಂಡು ಓಡಾಡ್ತಾರಂತೆ.
ನೀನ್ ಏನ್ ಕೆಲಸ ಮಾಡ್ತಿದ್ದೀಯ ಎಂದು ಸಚಿವ ಸೋಮಣ್ಣ, ಗೋವಿಂದರಾಜನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ್‌ಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಈ ವೇಳೆ ನಾಯಂಡಹಳ್ಳಿಯ ಗುರುಸಾರ್ವಭೌಮನಗರದಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಲಾಯಿತು. ಶೀಘ್ರವಾಗಿ ಇಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸುವ ಭರವಸೆ ನೀಡಿದರು.