Advertisement

ತುಂಗಭದ್ರೆಗೆ ಸಚಿವ ಸಿಂಗ್‌ ಬಾಗಿನ

05:18 PM Jul 15, 2022 | Team Udayavani |

ಕೊಪ್ಪಳ: ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಕ್ತ ವರ್ಷ ಎರಡೂ ಹಂಗಾಮಿಗೂ ಸಮರ್ಪಕವಾಗಿ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಹೇಳಿದರು.

Advertisement

ತುಂಬಿದ ತುಂಗಭದ್ರಾ ಜಲಾಶಯಕ್ಕೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ, ಗಂಗಾಮಾತೆಗೆ ಬಾಗಿನ ಸಮರ್ಪಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಡ್ಯಾಂ ಸುಮಾರು 40 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಜುಲೈನಲ್ಲಿ ಅಂದರೆ ಅವಧಿ ಗೂ ಮುನ್ನವೇ ಭರ್ತಿಯಾಗಿದೆ. ರೈತರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಜನರಲ್ಲಿ ಹರ್ಷ ತಂದಿದೆ. ನಮ್ಮ ಸಂಸ್ಕೃತಿಯಂತೆ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಲು ಸಂತಸವಾಗುತ್ತಿದೆ. ಬರುವ ದಿನಗಳಲ್ಲಿ ರೈತರಿಗೆ ಇದೇ ರೀತಿ ಸುಖ, ಸಮೃದ್ಧಿ ತರಲಿ ಎಂದು ಆಶಿಸುತ್ತೇನೆ. ತುಂಗಭದ್ರೆಯಿಂದ ಹೆಚ್ಚುವರಿ ನೀರು ನದಿಪಾತ್ರಕ್ಕೆ ಹರಿಬಿಟ್ಟಿದೆ. ಜನರಿಗೆ, ರೈತರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಪ್ರತಿವರ್ಷ ಇದೇ ರೀತಿ ತುಂಗಭದ್ರೆ ತುಂಬಿ ತುಳುಕಲಿ ಎಂದು ಹಂಪಿ ವಿರೂಪಾಕ್ಷನಿಗೆ ಬೇಡಿಕೊಳ್ಳುತ್ತೇನೆ. ಈ ಬಾರಿ ಎರಡೂ ಹಂಗಾಮಿಗೂ ರೈತರಿಗೆ ತುಂಗಭದ್ರೆ ನೀರು ಸಮರ್ಪಕವಾಗಿ ಲಭ್ಯವಾಗುವ ಎಲ್ಲ ವಿಶ್ವಾಸವಿದೆ ಎಂದರು.

ತುಂಗಭದ್ರೆ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ನದಿಯಾಗಿದೆ. ವಿಜಯನಗರ ಇಷ್ಟು ದಿನ ಬಳ್ಳಾರಿ ಜಿಲ್ಲೆ ತಾಲೂಕಾಗಿತ್ತು. ಈಗ ಹೊಸ ಜಿಲ್ಲೆಯಾಗಿ ಅಭಿವೃದ್ಧಿ ಕಾಣುತ್ತಿದೆ. ವಿಜಯನಗರ ಜಿಲ್ಲೆ ನನಗೆ ಪುನರ್ಜನ್ಮ ಕೊಟ್ಟಿದೆ. ಪ್ರಸ್ತುತ ಡ್ಯಾಂನಿಂದ 1.23 ಲಕ್ಷ ಕ್ಯೂಸೆಕ್‌ ನೀರನ್ನು ನದಿಪಾತ್ರಕ್ಕೆ ಹರಿ ಬಿಡಲಾಗುತ್ತಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಬಾರಿ ತುಂಗಭದ್ರಾ ಜಲಾಶಯ ಜುಲೈನಲ್ಲೇ ತುಂಬುವ ಮೂಲಕ ಪ್ರಕೃತಿಯೂ ರೈತರ ಬದುಕು ಹಸನಾಗಿಸಲು ಸಹಕಾರ ನೀಡಿದೆ. ರೈತರು ನೀರನ್ನು ಪೋಲು ಮಾಡದೇ, ಮಿತವಾಗಿ ಬಳಸಬೇಕು. ಲಭ್ಯವಾಗುವ ನೀರಿನ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯುವಂತಾಗಬೇಕು ಎಂದರು.

Advertisement

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್‌, ತುಂಗಭದ್ರಾ ಜಲಾಶಯ ವಿಭಾಗದ ಮುಖ್ಯ ಎಂಜಿನಿಯರ್‌ ಎಲ್‌. ಬಸವರಾಜ, ಅಧಿಧೀಕ್ಷಕ ಅಭಿಯಂತರ ಸೂರ್ಯಕಾಂತ ಮಾಲೆ, ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ್‌, ಸತ್ಯಪ್ಪ, ಎಇಇ ಧರ್ಮರಾಜ್‌, ಜಾನೇಕರ್‌ ಬಸಪ್ಪ ಸೇರಿ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ತುಂಗಭದ್ರಾ ನದಿಗೆ ವಿಶೇಷ ಧಾರ್ಮಿಕ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿ ಮಳೆ, ಬೆಳೆ ಚೆನ್ನಾಗಿ ಆಗಲಿ. ಪ್ರತಿವರ್ಷ ಡ್ಯಾಂ ಭರ್ತಿಯಾಗಿ ರೈತಾಪಿ ವಲಯಕ್ಕೆ ಸಂತಸವನ್ನು ತರಲಿ ಎಂದು ಗಂಗಾಮಾತೆಯಲ್ಲಿ ಬೇಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next