Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ

06:59 PM May 06, 2021 | Team Udayavani |

ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಗತ್ಯ ವಸ್ತುಗಳ ಖರೀದಿಗೆ  ಬೆಳಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ, 10 ಗಂಟೆಯೊಳಗೆ ಪ್ರತಿಯೊಬ್ಬರು ಮನೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ಇಂದು (ಮೇ.06) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸಲು ಕರೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಕರ್ಫ್ಯೂ ಜಾರಿಗೆ ತಂದು 8 ದಿನಗಳಾದರೂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ, ಸಾರ್ವಜನಿಕರು ಅನಗತ್ಯವಾಗಿ ಸಣ್ಣಪುಟ್ಟ ನೆಪಗಳನ್ನು ಹೇಳಿಕೊಂಡು ನಗರದ ತುಂಬೆಲ್ಲಾ ಅನಾವಶ್ಯಕವಾಗಿ ಓಡಾಡುತ್ತಿರುವುದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಕರ್ಫ್ಯೂ ಅನುಷ್ಠಾನವನ್ನು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ದೈನಂದಿನ ಅಗತ್ಯ ವಸ್ತುಗಳನ್ನು ಅವಶ್ಯವಿದ್ದಲ್ಲಿ ಮಾತ್ರ  ಖರೀದಿಗೆ ಮನೆಯಿಂದ ಹೊರಬರಬೇಕು, ಇಲ್ಲವಾದಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು ಎಂದರು.

ಶನಿವಾರ ಮತ್ತು ಭಾನುವಾರ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಮಾಡಲು ಚಿಂತಿಸಲಾಗಿದೆ. ಕೊರೋನಾ ಪ್ರಕರಣಗಳು ಏರುಗತಿಯಲ್ಲಿ ಕಂಡುಬಂದಲ್ಲಿ ಅನಿವಾರ್ಯ. ಆ ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ ಹಾಪ್ ಕಾಮ್ಸ್, ಹಾಲಿನ ಅಂಗಡಿಗಳು, ತರಕಾರಿ, ಹಣ್ಣುಹಂಪಲು ತಳ್ಳುಗಾಡಿಗಳಿಗೆ ಅವಕಾಶ ನೀಡಲಾಗುವುದು ಎಂದರು.

Advertisement

ಕರ್ಫ್ಯೂ ಅವಧಿಯಲ್ಲಿ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಿಸಬೇಕು. ನಕಲಿ ಗುರುತಿನ ಚೀಟಿ ತೋರಿಸುವವರು, ಅನಗತ್ಯವಾಗಿ ಸಕಾರಣವಿಲ್ಲದೆ ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ನಿರ್ಧಾಕ್ಷೀಣ್ಯವಾಗಿ ಸೀಝ್ ಮಾಡಬೇಕು ಎಂದರು.

ಕೋವಿಡ್ ನಿರೋಧಕ ಚುಚ್ಚು ಮದ್ದು ಪಡೆಯಲು ತೆರಳುವವರು, ವೈದ್ಯಕೀಯ ಚಿಕಿತ್ಸೆಗೆ, ಮತ್ತಿತರ ತುರ್ತು ಕೆಲಸ ಇರುವವರು ಕಂಡುಬಂದಲ್ಲಿ ಅವರುಗಳಿಗೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯಾದ್ಯಂತ ಪೂರ್ವ ನಿಗದಿತವಾಗಿರುವ  ಸಭೆ  ಸಮಾರಂಭಗಳನ್ನು ಮಾಡಲು ಮೇ.೧೫ ರವರೆಗೆ ಮಾತ್ರ ಅವಕಾಶ ನೀಡಬೇಕು, ಹೊಸದಾಗಿ ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ನೀಡಬಾರದು ಎಂದರು.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾಜಿಕ ಒಳಿತಿಗಾಗಿ ಸರ್ಕಾರ ಕೊರೋನ ಕರ್ಫ್ಯೂ ಜಾರಿಗೆ ತಂದಿದೆ ಜನರು ಸಹಕರಿಸಬೇಕು, ಜನರಿಗೆ, ವ್ಯಾಪಾರಸ್ಥರಿಗೆ ಹೆಚ್ಚಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದರೊಂದಿಗೆ ಲಾಕ್‌ಡೌನ್ ಜಾರಿ ಮಾಡಬೇಕು ಎಂದರು.

ಸ್ವಿಗ್ಗಿ, ಝೊಮೇಟೋ ಮುಂತಾದ ಆನ್ ಲೈನ್ ಆಹಾರ ಪೂರೈಕೆದಾರರು ರಾತ್ರಿ 10 ಗಂಟೆಯೊಳಗೆ ಕಾರ್ಯನಿರ್ವಹಿಸಿ ನಿಲ್ಲಿಸಬೇಕು. ಅವರು 11 ಗಂಟೆಯೊಳಗೆ ಮನೆ ಸೇರಬೇಕು ಎಂದರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮಾತನಾಡಿ, ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ನಗರದ ಆಯ್ದ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಅವರನ್ನು ಪ್ರಶ್ನಿಸಬೇಕು ಎಂದರು. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸಲಾಗುವುದು, ಇವರು ತಮಗೆ ನಿಗದಿಪಡಿಸಿದ ವ್ಯಾಪ್ತಿಯೊಳಗೆ ಸಂಚರಿಸಿ ಯಾವುದೇ ಲಾಕ್ ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ಹಾಗೂ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ನಿರ್ಗತಿಕರು ಹಾಗೂ ಕೆಲವು ವಲಸೆ ಕಾರ್ಮಿಕರಿಗೆ ನಗರದ ನಿರಾಶ್ರಿತ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಬೇಕು, ಅವರುಗಳ ಆರೋಗ್ಯ ತಪಾಸಣೆಗಳನ್ನು ಸಹ ಮಾಡಿ ಇದರಿಂದ, ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಮಿಕ ರೋಗಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next