ಚಿಕ್ಕಮಗಳೂರು: ಸರಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವ ಜವಾಬ್ದಾರಿ ಹಿರಿಯ ಸಚಿವರ ಮೇಲಿದೆ. ನಮ್ಮ ಬದ್ಧತೆ ರಾಜ್ಯದ ಜನತೆಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಟಿ. ಸೋಮಶೇಖರ್ ಸಹಿತ ಯಾವುದೇ ಸಚಿವರು ಬಾಲಿಶವಾಗಿ ಮಾತನಾಡಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡಬಾರದು. ಟಿಪ್ಪು ಬ್ಯಾನರ್ ಹರಿದವರನ್ನು ಮತ್ತು ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ತೆಗೆಸಿ ಅವಮಾನಿಸಿದವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇಂಥ ವಿಚಾರಗಳಲ್ಲಿ ಸರಕಾರ ಇನ್ನಷ್ಟು ಬಿಗಿಯಾಗಬೇಕು.
ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳು ಧ್ವಜಾರೋಹಣ ಮಾಡಿದ್ದಾರೆ. ಧ್ವಜ ಸಂಹಿತೆಯಲ್ಲಿ ಸಚಿವರು ಇಲ್ಲದಿರುವಾಗ ಧ್ವಜಾರೋಹಣ ಮಾಡುವ ಅಧಿಕಾರ ಅಧಿಕಾರಿಗಳಿಗೆ ನೀಡಿದ್ದಾರೆ.
ಶಾಸಕರು ಧ್ವಜಾರೋಹಣ ಮಾಡಲು ಧ್ವಜ ಸಂಹಿತೆಯಲ್ಲಿ ಬದಲಾವಣೆ ಆಗದ ಹೊರತು ಸಾಧ್ಯವಿಲ್ಲ. ಸಂಸದರು ಮತ್ತು ಶಾಸಕರು ಧ್ವಜಾರೋಹಣ ಮಾಡಬೇಕೆಂಬ ಚರ್ಚೆ ಬಹಳ ಕಾಲದಿಂದಿದೆ. ಧ್ವಜ ಸಂಹಿತೆಯಲ್ಲಿ ತಿದ್ದುಪಡಿಯಾಗುವ ತನಕ ಅದು ಸಾಧ್ಯವಿಲ್ಲ ಎಂದರು.