ಕಲಬುರಗಿ: ಬಿಜೆಪಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದರೂ, ಸೂಕ್ತವಾದ ಸ್ಥಾನಮಾನ ನೀಡುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತೆ ಸಾವಿತ್ರಿ ಕುಳಗೇರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎದುರು ಕಣ್ಣೀರು ಸುರಿಸಿದ ಘಟನೆ ನಡೆದಿದೆ. ನಗರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು.
ಸಭೆ ಮುಗಿದ ಬಳಿಕ ಸಚಿವೆ ಶೋಭಾ ಅವರಿಗೆ ಶಾಲು ಹೊದಿಸಿ ಗೌರವಿಸುವ ಸಂದರ್ಭದಲ್ಲಿ ಸಾವಿತ್ರಿ ಕುಳಗೇರಿ ಭಾವುಕರಾದರು.
“ಪಕ್ಷಕ್ಕೆ ಹೊಸದಾಗಿ ಬಂದವರಿಗೆ ಸ್ಥಾನಮಾನ ನೀಡಲಾಗುತ್ತಿದೆ. ನಿಗಮ ಮಂಡಳಿ ಸ್ಥಾನಗಳಿಗೆ ನೇಮಿಸಲಾಗುತ್ತಿದೆ. ಆದರೆ, ಎರಡು ದಶಕಗಳಿಂದ ಪಕ್ಷದ ಸಂಘಟನೆಗಾಗಿ ದುಡಿದವರಿಗೆ ಅವಕಾಶಗಳು ಸಿಗುತ್ತಿಲ್ಲ. ನಾನು ಅನೇಕ ವರ್ಷಗಳ ಕಾಲ ದುಡಿದಿದ್ದೇನೆ. ಆದರೂ ನನ್ನ ಸೇವೆಯನ್ನು ಪಕ್ಷ ಗುರುತಿಸಿಲ್ಲ’ ಎಂದು ಅಳಲು ತೋಡಿಕೊಂಡರು.
“ನಾನು ನಿಗಮ ಮಂಡಳಿ ಸ್ಥಾನಗಳಿಗೆ ಆಕಾಂಕ್ಷಿಯಾಗಿದ್ದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ನನ್ನನ್ನು ಕಡೆಗಣಿಸಲಾದೆ. ನನಗೆ ಅನ್ಯಾಯ ಮತ್ತು ನೋವುಂಟಾಗಿದೆ’ ಎಂದು ಸಾವಿತ್ರಿ ಕಣ್ಣೀರಿಟ್ಟರು. ಸಾವಿತ್ರಿ ಕುಳಗೇರಿ ಅವರನ್ನು ಶೋಭಾ ಕರಂದ್ಲಾಜೆ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಕೆಲ ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ ಕೂಡ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ:ಕೋಚ್ ರವಿ ಶಾಸ್ತ್ರೀಗೆ ಕೋವಿಡ್ ಪಾಸಿಟಿವ್: ಶಾಸ್ತ್ರೀ ಸೇರಿ ನಾಲ್ಕು ಮಂದಿ ಐಸೋಲೇಶನ್ ಗೆ
“ಬಿಜೆಪಿ ನಾಯಕರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ. ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸಬೇಕು. ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ’ ಎಂದು ರಾಘವೇಂದ್ರ ವಿಡಿಯೋ ಹೇಳಿಕೆ
ನೀಡಿದ್ದರು. ನಂತರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.