Advertisement

Karavali Bypass-Malpe; ಕಾಮಗಾರಿ ಆರಂಭಕ್ಕೆ 3 ದಿನದ ಗಡು ವಿಧಿಸಿದ ಸಚಿವೆ ಶೋಭಾ ಕರಂದ್ಲಾಜೆ

12:17 AM Jan 09, 2024 | Team Udayavani |

ಮಣಿಪಾಲ: ಕರಾವಳಿ ಬೈಪಾಸ್‌ನಿಂದ ಮಲ್ಪೆ ವರೆಗೆ ರಾ.ಹೆ. 169ಎ ವಿಸ್ತರಣೆ ಯೋಜನೆಗೆ ಸಂಬಂಧಿಸಿ 3 ದಿನದ ಒಳಗೆ ಕಾಮಗಾರಿ ಆರಂಭಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಜನಪ್ರತಿನಿಧಿ ಗಳು, ಸ್ಥಳೀಯರು, ಅಧಿಕಾರಿಗಳ ಜತೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಲ್ಪೆ – ಕರಾವಳಿ ಬೈಪಾಸ್‌
ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಫೈಲ್‌ಗ‌ಳಷ್ಟೇ ಓಡಾಡುತ್ತಿವೆ. ಕಾಮಗಾರಿ ಆರಂಭಿಸುವ ಗಾಂಭೀರ್ಯ ಯಾರಲ್ಲಿಯೂ ಇಲ್ಲವೇ ಎಂದವರು ಪ್ರಶ್ನಿಸಿದರು. ಈ ರೀತಿಯ ವಿಳಂಬದಿಂದ ರಾಜ್ಯಕ್ಕೆ ಹೆಚ್ಚುವರಿ ಮಂಜೂರಾಗುವ ಹೆದ್ದಾರಿ ಯೋಜನೆಗಳಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು ಭೂ ಸ್ವಾಧೀನಾಧಿಕಾರಿಯಿಂದ ಜೆಎಂಸಿ ನಕ್ಷೆ ಅನುಮೋದನೆ ಪ್ರಕ್ರಿಯೆ ಬಾಕಿ ಇದ್ದು, ಸರ್ವೆ ಕಾರ್ಯ ವನ್ನು ಶೀಘ್ರ ನಡೆಸಲಾಗುವುದು ಎಂದು ಎಸಿ, ಭೂಸ್ವಾಧೀನಾಧಿಕಾರಿ ರಶ್ಮಿ ತಿಳಿಸಿದರು.

ಈ ಕೆಲಸ ನಡೆಯುತ್ತಿರುವಂತೆ ಪರಿಹಾರಕ್ಕೆಸಂಬಂಧಿಸಿದ ನೋಟಿಸ್‌ ವಿತರಣೆ ನಾಳೆಯಿಂದಲೇ ಆರಂಭಗೊಳ್ಳಬೇಕು ಎಂದು ಸೂಚಿಸಿದರು.

Advertisement

ಅಂಬಲಪಾಡಿ, ಕಟಪಾಡಿ ಜಂಕ್ಷನ್‌ ಕಾಮಗಾರಿ ಆರಂಭಿಸುವ ಪ್ರಕ್ರಿಯೆ ಶೀಘ್ರ ಆರಂಭಿಸುವಂತೆ ಮತ್ತು ಸಂತೆಕಟ್ಟೆ ಕಾಮಗಾರಿ ಶೀಘ್ರ ಮುಗಿಸಲು ಕ್ರಮವಹಿಸುವ ಬಗ್ಗೆ ಸೂಚಿಸಿದರು.

ರಾ.ಹೆ. ಪ್ರಾಧಿಕಾರ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್‌ ಜಾವಿದ್‌ ಅಜ್ಮಿ ಮಾತನಾಡಿ, ಸಂತೆಕಟ್ಟೆ ಕಾಮಗಾರಿಗೆ ಕಲ್ಲು ಬಂಡೆ ತೊಡಕಾಗಿದ್ದು, ಸ್ಫೋಟಿಸಿ ಕಲ್ಲು ತೆರವು ಮಾಡಲಾಗುತ್ತಿದೆ ಎಂದು ಕಾಮಗಾರಿ ಪ್ರಗತಿಯ ವಿವರಣೆ ನೀಡಿದರು.

ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಡಿಸಿ ಡಾ| ಕೆ. ವಿದ್ಯಾ ಕುಮಾರಿ, ಎಸ್ಪಿ ಡಾ| ಕೆ. ಅರುಣ್‌ ಮತ್ತಿತರರು ಇದ್ದರು.

12, 15 ಮೀ. ಗೊಂದಲ ನಿವಾರಿಸಿ
ಆರಂಭದಲ್ಲಿ ಕರಾವಳಿಯಿಂದ ಮಲ್ಪೆಗೆ ರಸ್ತೆಯ ಮಧ್ಯ ಭಾಗದಿಂದ 15 ಮೀ. ಅಗಲದ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದೀಗ 12 ಮೀ. ರಸ್ತೆ ನಿರ್ಮಾಣಕ್ಕೆ ನಕ್ಷೆ ಮಾಡಲಾಗಿದೆ. ಈ ಗೊಂದಲ ನಿವಾರಿ ಸುವಂತೆಯೂ ಹೆಬ್ರಿಯಿಂದ ಪರ್ಕಳದ ಮಾದರಿಯ 15 ಮೀ. ರಸ್ತೆ ಯನ್ನೇ ನಿರ್ಮಿಸುವಂತೆಯೂ ಸ್ಥಳೀಯರು, ಮೀನುಗಾರ ಮುಖಂಡರು ಆಗ್ರಹಿಸಿದರು. ರಾ.ಹೆ. ಮಾರ್ಗಸೂಚಿ ಪ್ರಕಾರ ಇಡೀ ದೇಶದಲ್ಲಿ ಹೆದ್ದಾರಿ
ನಿರ್ಮಾಣ ಗ್ರಾಮೀಣ ಭಾಗದಲ್ಲಿ 15 ಮೀ. ನಗರ ಭಾಗದಲ್ಲಿ 12 ಮೀ.ನಂತೇ ಹೋಗುತ್ತದೆ. ಈ ಪ್ರಕಾರವೇ ಯೋಜನೆ ಇದೆ ಎಂದು ಶೋಭಾ ತಿಳಿಸಿದರು.

ಕರಾವಳಿ-ಮಲ್ಪೆ ನಗರ ವ್ಯಾಪ್ತಿ ಇರುವುದರಿಂದ 12 ಮೀ. ಅಗಲದಲ್ಲಿ ಒಟ್ಟು 24 ಮೀ. ಅಗಲದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ರಸ್ತೆಯ ಅಳತೆ ಎಲ್ಲ ಕಡೆ 9 ಮೀ. ಆಗಿರುತ್ತದೆ. ಮಧ್ಯದ ಡಿವೈಡರ್‌ ಗಾತ್ರ ಕಿರಿದಾಗಿ ರೂಪಿಸಲಾಗುತ್ತದೆ ಎಂದರು. ಇದರಲ್ಲಿ ಚರಂಡಿ, ಕಾಲುದಾರಿ ಎಲ್ಲವನ್ನು ನಿರ್ಮಿಸಲಾಗುತ್ತದೆ ಎಂದು ರಾ.ಹೆ. ಶೃಂಗೇರಿ ಉಪ ವಿಭಾಗದ ಎಇಇ ಮಂಜುನಾಥ್‌ ಕೆ.ವಿ. ಸ್ಪಷ್ಟಪಡಿಸಿದರು.

ಇಂದ್ರಾಳಿ ಸೇತುವೆ: ಆರ್‌ಡಿಎಸ್‌ಒ ಪರಿಶೀಲನೆ ಬಾಕಿ
ಇಂದ್ರಾಳಿ ರೈಲ್ವೇ ಸೇತುವೆ ಸಂಬಂಧಿಸಿ ಸೇತುವೆಯ ಗರ್ಡರ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರೈಲ್ವೇ ಸುರಕ್ಷಾ ಪ್ರಾಧಿಕಾರ ಆಯುಕ್ತರು (ಆರ್‌ಡಿಎಸ್‌ಒ) ಪರಿಶೀಲನೆ ನಡೆಸಿದ ಅನಂತರ ಗರ್ಡರ್‌ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಆರ್‌ಡಿಎಸ್‌ಒ ಸಂಪರ್ಕಿಸಿ ಶೀಘ್ರ ಪರಿಶೀಲಿಸಿ ಅನುಮೋದನೆ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಶೋಭಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next