ಶಿರಸಿ: ರೈತರು ಕೃಷಿಯಿಂದ ವಿಮುಖವಾದರೆ ದೇಶ ಸಫಲತೆ ಕಾಣಲು ಸಾಧ್ಯವೇ ಇಲ್ಲ. ಆದ್ದರಿಂದ ರೈತರಿಗೆ ಗೌರವ ಕೊಡುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಮನುವಿಕಾಸ ಸಂಸ್ಥೆ ಹಾಗೂ ಅಜೀಂ ಪ್ರೇಮಜೀ ಫೌಂಡೇಶನ್ ಸಹಯೋಗದಲ್ಲಿ ಸೋಮವಾರ ನಡೆದ ಕೆರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹಾಗೂ ದೇಶಕಾಯುವ ಸೈನಿಕರಿಗೆ ಸಮಾಜ ಗೌರವ ನೀಡಬೇಕು. ಇವರನ್ನು ನಾವು ಗೌರವಿಸದೇ ಇದ್ದರೆ ನಮಗೆ ಬದುಕಲು ಸಾಧ್ಯವೇ ಇಲ್ಲ. ರೈತ ಸಂಪನ್ನನಾದರೆ ಮಾತ್ರ ನಾಡು ಸುಭಿಕ್ಷವಾಗಿರಲು ಸಾಧ್ಯ. ನಾಡು ಸುಭಿಕ್ಷವಾಗಿರಬೇಕೆಂದರೆ ರೈತರು ಹಾಗೂ ನೀರಿನ ಮೂಲಗಳು ಸಂಪದ್ಭರಿತವಾಗಿರಬೇಕು. ರೈತರ ಹೊಲಗಳಿಗೆ ನೀರುಣಿಸಲು ಕೆರೆಗಳ ಹೂಳೆತ್ತುವುದು ತುಂಬಾ ಮುಖ್ಯವಾಗಿದೆ ಎಂದರು.
ಈಗಾಗಲೇ ಬೇಡ್ತಿ ನೀರಿನ ಯೋಜನೆಯ ಮೂರನೇ ಹಂತದ ಕಾರ್ಯ ಮುಂದುವರೆದಿದೆ. ಸರಕಾರ ಸಾಕಷ್ಟು ನೀರಿನ ಯೋಜನೆಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು ಮನುವಿಕಾಸದಂತ ಸಂಸ್ಥೆ ಕೆರೆ ಹೂಳೆತ್ತುವ ಮೂಲಕ ಪೂರಕ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ಒಳ್ಳೆಯ ಕಾರ್ಯಕ್ಕೆ ಜಿಲ್ಲಾಡಳಿತ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ ಈಗಾಗಲೆ 149 ದೊಡ್ಡ ಕೆರೆ ಹೂಳೆತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿರ ಕೆರೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. 35 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗಾವಕಾಶ, 30 ಸಾವಿರಕ್ಕೂ ಅಧಿಕ ಕೆರೆಗಳ ಪುನಶ್ಚೇತನ ಕಾರ್ಯ ನಡೆದಿದೆ ಎಂದು ವಿವರಿಸಿದರು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಪ್ರಭಾಕರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ರವಿ ನಾಯ್ಕ, ತಾಪಂ ಇಒ ಎಫ್.ಜಿ. ಚಿನ್ನಣ್ಣನವರ್, ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ್, ರೋಟರಿ ಕ್ಲಬ್ ಅಧ್ಯಕ್ಷ ಪಾಂಡುರಂಗ ಪೈ, ಪ್ರಮುಖರಾದ ಜಯಶೀಲ ಗೌಡ, ಬಿ.ಕೆ. ಕೆಂಪರಾಜ, ಎಸ್.ಎಂ. ಕಮನಳ್ಳಿ ಮತ್ತಿತರರು ಉಪಸ್ಥಿತರಿದ್ದರು.