ಶಿರಸಿ: ರಾಜ್ಯದಲ್ಲಿ ಶ್ರಮಿಕ ವರ್ಗದ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಅದನ್ನು ಅನುಗುಣವಾಗಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 19 ಹೊಸ ಚಿಕಿತ್ಸಾಲಯಗಳನ್ನು ಆರಂಭಿಸಲು ಮಂಜೂರಾತಿ ನೀಡಿದ್ದು, ಅದರಂತೆ ಕಾರ್ಮಿಕರ ರಾಜ್ಯ ವಿಮಾ (ವೈದ್ಯಕೀಯ) ಸೇವೆಗಳಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.
ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ನೂತನ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಈಗಾಗಲೇ 113 ಇಎಸ್ಐ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದಲ್ಲಿ ಸುಮಾರು 5000 ವಿಮಾ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಆರೋಗ್ಯ ಹಿತದೃಷ್ಟಿಯಿಂದ ಇಲ್ಲಿ ಚಿಕಿತ್ಸಾಲಯ ಆರಂಭಿಸಲಾಗುತ್ತಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಈ ಚಿಕಿತ್ಸಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದ ಸಚಿವರು, 21 ಸಾವಿರ ವೇತನಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಕಾರ್ಮಿಕರು ಈ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಕಾರ್ಮಿಕರ ನೋಂದಣಿ ವಂತಿಗೆ ಶೇ.0.75% ಹಾಗೂ ಉದ್ಯೋಗದಾತರಿಂದ ಶೇ. 3.25% ರಷ್ಟು ಕಡಿತಗೊಳಿಸಿ ಒಟ್ಟಾರೆ ಶೇ.4 ರಷ್ಟು ವಂತಿಗೆ ಪಡೆದು ವಿಮಾ ಕಾರ್ಡ್ ನೀಡಲಾಗುತ್ತದೆ ಎಂದರಲ್ಲದೆ, ಯೋಜನೆಯಡಿ ವಿಮಾದಾರನ ಪತ್ನಿ, ಮಕ್ಕಳು, ತಂದೆ- ತಾಯಿ, ಅಪ್ರಾಪ್ತ ಅಣ್ಣ- ತಂಗಿಯೂ ಯೋಜನೆಯ ಲಾಭ ಪಡೆಯಬಹುದು ಎಂದರು.
ಮಹಿಳಾ ವಿಮಾದಾರರಿಗೆ ಮಾತೃತ್ವ ಹಿತಲಾಭ ರಜೆ ಸೌಲಭ್ಯವನ್ನು ನೀಡಲಾಗುವುದು, ಮುಖ್ಯವಾಗಿ ವೈದ್ಯಕೀಯ ಸೌಲಭ್ಯ, ತುರ್ತು ಚಿಕಿತ್ಸೆ, ಎಲ್ಲಾ ತರಹದ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ, ಉತ್ಕ್ರಷ್ಠ ಚಿಕಿತ್ಸೆ, ಅಂಗವಿಕಲತೆ ಹಿತ ಲಾಭ ಪಡೆಯಬಹುದಾಗಿದ್ದು, ಕಾರ್ಯನಿರ್ವಹಿಸುವ ವೇಳೆ ವಿಮಾದಾರರು ಅಪಘಾತಕ್ಕೆ ಒಳಗಾದಲ್ಲಿ ಕಾರಾವಿ ನಿಗಮದಡಿ ಶೇಕಡಾವಾರು ಆರ್ಥಿಕ ಪರಿಹಾರವೂ ಲಭಿಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿವರಿಸಿದರು.
ಸಮಾರಂಭದಲ್ಲಿ ಮಾತನಾಡಿದ ವಿಧಾನಸಭಾ ಆಧ್ಯಕ್ಷರಾದ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರು, ಶಿರಸಿಯಲ್ಲಿ ವೈದ್ಯಕೀಯ ಚಿಕಿತ್ಸಾಲಯ ಆರಂಭವಾಗಿರುವುದರಿಂದ ಈ ಭಾಗದ ಶ್ರಮಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರಲ್ಲದೆ, ಕಾರ್ಮಿಕರು ಈ ಚಿಕಿತ್ಸಾಲಯದ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಕಾರ್ಮಿಕ ರಾಜ್ಯವಿಮಾ ಸೇವೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.