ಹುಬ್ಬಳ್ಳಿ: ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎನ್ನುತ್ತಾರೆ. ಆದರೆ ಎಲ್ಲೂ ಗೆದ್ದಿರುವ ಉದಾಹರಣೆಯಿಲ್ಲ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿ ತೋರುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದ ಅಭಿವೃದ್ಧಿ ಮರೀಚಿಕೆ ಆಗಿದೆ. ಅದು ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಶಾಪವಾಗಿತ್ತು. ಅದನ್ನು ಮುಕ್ತಗೊಳಿಸಿ ರಾಜ್ಯದಲ್ಲಿಂದು ಬಿಜೆಪಿಯು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದೆ. ಎಲ್ಲ ರೀತಿ ಸಮಗ್ರ ಅಭಿವೃದ್ಧಿ ಮಾಡುವ ಕೆಲಸ ಮಾಡಲಾಗುವುದು ಎಂದರು.
ಹು-ಧಾ ತಗ್ಗುಗುಂಡಿಗಳ ನಗರವೆಂಬ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಶ್ರೀರಾಮುಲು, ಡಿಕೆಶಿ ಕನಕಪುರದಿಂದ ಬಂದವರು. ಅವರಿಗೆ ಇಲ್ಲಿಯ ಬಗ್ಗೆ ಅಷ್ಟು ಗೊತ್ತಿಲ್ಲ. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಹು-ಧಾಕ್ಕೆ ಐಐಐಟಿ, ಐಐಟಿ, ಸ್ಮಾರ್ಟ್‌ಸಿಟಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಿದ ಶ್ರೇಯಸ್ಸು ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರಗೆ ಸಲ್ಲುತ್ತದೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯು ಮಿಷನ್ 60 ಗುರಿಯೊಂದಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಲಾಭದಾಯಕದತ್ತ ಕೊಂಡೊಯ್ಯಲು ಅನೇಕ ಯೋಜನೆರೂಪಿಸಲಾಗುತ್ತಿದೆ.ಕೇಂದ್ರ ಸರ್ಕಾರದಿಂದ ಅನುದಾನ ತರಲು, ಇಲೆಕ್ಟ್ರಿಕಲ್ ಬಸ್ ತರಲು ಯೋಜಿಸಲಾಗಿದೆ. ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಇನ್ಮುಂದೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು. ಎಲ್ಲವನ್ನೂ ಸರಿಪಡಿಸಿ ಸಂಸ್ಥೆಯನ್ನು ಸುಧಾರಣೆಗೊಳಿಸಲಾಗುವುದು. ಖಾಸಗಿ ಸಂಸ್ಥೆಯ ಬಸ್‌ಗಳ ಸಂಚಾರಕ್ಕಿಂತ ಸರಕಾರದ ನಿಗಮಗಳ ಬಸ್ ಗಳ ಓಡಾಟಕ್ಕೆ ಯಾವ ಪರಿಸ್ಥಿತಿಯಲ್ಲೂ ತೊಂದರೆ ಆಗದಂತೆ ಮೊದಲ ಆದ್ಯತೆ ನೀಡಲಾಗುವುದು. ಕೆಲವೆಡೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕಾರಣಾಂತರಗಳಿಂದ ವಿಳಂಬವಾಗಿದೆ. ಮುಂದೆ ಅದು ಪೂರ್ಣಗೊಳ್ಳಲಿದೆ ಎಂದರು.