ಹುಬ್ಬಳ್ಳಿ: ಸಂಸದ ಅನಂತಕುಮಾರ ಹೆಗಡೆ ನಾಲ್ಕು ವರ್ಷ ಎಲ್ಲಿ ಕಣ್ಮರೆಯಾಗಿದ್ದರು. ಈಗ ಬಂದು ಸಂವಿಧಾನ ಬದಲಾಯಿಸುತ್ತೇವೆ ಎಂದು ಹುಚ್ಚಾಸ್ಪತ್ರೆಯಿಂದ ಬಂದವರಂತೆ ತಲೆಕೆಟ್ಟ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ ಕುಮಾರ ಹೆಗಡೆ ಅವರ ಇಂತಹ ಹೇಳಿಕೆಗಳಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿಯವರೆಂದಿಗೂ ಅಭಿವೃದ್ಧಿ ಬಗ್ಗೆ ಮಾತನಾಡಿ ಮತ ಕೇಳುವುದಿಲ್ಲ. ಭಾವನಾತ್ಮಕ ವಿಚಾರಗಳನ್ನೇ ಕೆದಕಿ, ಜನರನ್ನು ಹುಚ್ಚರಾಗಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾರೆ ಎಂದರು.
ಕಲ್ಲಪ್ಪ- ಮಲ್ಲಪ್ಪ ಜಗಳ ಮಾಡಿದರೆ ಬಿಜೆಪಿಯವರಿಗೆ ಲಾಭವಾಗದು. ಕಲ್ಲಪ್ಪ-ಇಸ್ಮಾಯಿಲ್ ಜಗಳವಾಡಬೇಕು ಆಗ ಅವರಿಗೆ ಲಾಭ. ಕಾಂಗ್ರೆಸ್ ತುಷ್ಠೀಕರಣ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ವಿನಾಕಾರಣ ಆರೋಪಿಸುತ್ತಿದೆ ಎಂದರು.
ರಾಜ್ಯದಲ್ಲಿ ದಲಿತ ಸಿಎಂ ಬೇಡಿಕೆಯಲ್ಲಿ ತಪ್ಪೇನಿದೆ. ಎಲ್ಲ ಪಕ್ಷಗಳಲ್ಲಿಯೂ ದಲಿತರು ಸಿಎಂ ಆಗಲಿ. ಸದ್ಯ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಪ್ರತಿಯೊಂದು ಸಮಾಜದವರು ಸಿಎಂ ಬೇಡಿಕೆ ಸಲ್ಲಿಸಬಹುದು. ಆದರೆ ಸಿಎಂ ಯಾರು ಎಂದು ನಿರ್ಧರಿಸುವುದು ಪಕ್ಷ ಹೈಕಮಾಂಡ್ ಎಂದರು.
ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮಾತ್ರ ಕಳುಹಿಸಲಾಗಿದೆ. ಕ್ಷೇತ್ರದ ಜನರ ಬೇಡಿಕೆಯೂ ಆಗಿದೆ. ನೀವು ನಾಮಪತ್ರ ಹಾಕಿ ಪಕ್ಷದ ಕಾರ್ಯಕ್ಕೆ ಹೋಗಿ ಚುನಾವಣೆ ನಾವು ಮಾಡುತ್ತೇವೆ ಎಂಬುದು ಜನರ ಅನಿಸಿಕೆಯಾಗಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿ ಪಕ್ಷದ ರಾಷ್ಟ್ರಜವಾಬ್ದಾರಿ ಹೊತ್ತಿರುವ ಖರ್ಗೆಯವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ನೋಡಬೇಕು ಎಂದು ಸಚಿವರು ಹೇಳಿದರು