ಮೈಸೂರು: ರೋಶನ್ ಬೇಗ್ ಬಿಜೆಪಿ ಪಕ್ಷ ನಂಬಿಕೊಂಡು ಬರಲಿಲ್ಲ. ರೋಶನ್ ಬೇಗ್ ಬಾಂಬೆ ಟೀಮ್ ನಲ್ಲೂ ಇರಲಿಲ್ಲ. ಕಾಂಗ್ರೆಸ್ ನ ಆಂತರಿಕ ಬೇಗುದಿಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ರೋಶನ್ ಬೇಗ್ ಬಿಜೆಪಿಯಿಂದ ಟಿಕೆಟ್ ಕೇಳಲಿಲ್ಲ. ಅವರು ಬಿಜೆಪಿ ಟಿಕೆಟ್ ಕೇಳಿದ್ದರೆ ಸಿಗುತ್ತಿತ್ತು ಎಂದರು.
ಐಎಂಎ ಹಗರಣದ ಹಿನ್ನೆಲೆಯಲ್ಲಿ ಬೇಗ್ ಅವರನ್ನು ಬಂಧಿಸಲಾಗಿದೆ. ಅವರೇ ಹೇಳಿರುವಂತೆ ಕ್ಲೀನ್ ಚಿಟ್ ತೆಗೆದುಕೊಂಡು ಹೊರ ಬರಲಿದ್ದಾರೆ ಎಂದು ಎಸ್. ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಒತ್ತಾಯಕ್ಕೆ ಬೆಂಬಲ: ಡಿಸಿಎಂ ಅಶ್ವತ್ಥನಾರಾಯಣ
ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಇದು ಕೇವಲ ಊಹಾಪೋಹ. ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿ ಸಭೆ ನಡೆಸಿದ್ದು ಎಂದರು.
ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗೆ ಪಕ್ಷ ಹೆಚ್ಚಿನ ಒತ್ತು ನೀಡುತ್ತಿದೆ. ಈ ಸಂಬಂಧ ವಿಭಾಗೀಯವಾರು ಉಸ್ತುವಾರಿಗಳನ್ನು ನೇಮಿಸಲಾಗಿದೆ. ಸದ್ಯದಲ್ಲೇ ವಿಭಾಗೀಯ ಉಸ್ತುವಾರಿಗಳು ಪ್ರವಾಸ ಕೈಗೊಳ್ಳಲಿದ್ದಾರೆ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.