ಮೈಸೂರು: ಕೇಂದ್ರ ಸರ್ಕಾರ ಮಂಡಿಸಿದ 2021-22 ಆಯವ್ಯಯದಲ್ಲಿ ರಾಜ್ಯ ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿದ್ದು, ರಾಜ್ಯದ ಸಂಸದರ ಬೇಡಿಕೆಯಂತೆ ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರೀಕ್ಷೆಯಂತೆಯೇ ರಾಜ್ಯಕ್ಕೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಇದನ್ನು ವಿರೋಧ ಪಕ್ಷಗಳು ಹೊಗಳಲು ಸಾಧ್ಯವೇ?. ಸಂಸದರು ರಾಜ್ಯಕ್ಕೆ ಬೇಕೆಂದು ಸಲ್ಲಿಸಿದ್ದ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ ಎಂದು ಸ್ಟಷ್ಟಪಡಿಸಿದರು.
ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು: ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರಗಳಿಗೂ ವಿಶೇಷ ಗಮನ ನೀಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ಸಾಲ ನೀಡಲಾಗು ವುದು, ಎಪಿಎಂಸಿ ಬಲಪಡಿಸಲು ಆತ್ಮನಿರ್ಭರ ಭಾರತ್ ಯೋಜನೆಯಡಿ ಅನುದಾನ ಮೀಸಲಿಡ ಲಾಗಿದೆ. ಈಗ ಜ್ಯೋತಿ ಭತ್ತ ಖರೀದಿ ಮಾಡಲು ಆದೇಶ ನೀಡಲಾಗಿದೆ ಎಂದರು.
ಗ್ರಾಮೀಣ ಜನರಿಗೆ ಶುದ್ಧ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ ನೀಡುತ್ತಿದ್ದು, ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಲಾ ಗು ತ್ತಿದೆ ಎಂದು ಭರವಸೆ ನೀಡಿದರು. ಕರ್ನಾಟಕಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದು: 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು, 1,197 ಕಿ.ಮೀ ಉದ್ದದ ರಸ್ತೆಗಳಿಗೆ 10,904 ಕೋಟಿ ರೂ. 2021- 22ರಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ ರೂ. ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣ, 2ನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರೂ. ಬಿಡುಗಡೆ, ಬೆಂಗಳೂರು ಉ± ನಗರ ಯೋಜನೆಗೆ 23,093 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.
ರಾಜ್ಯದ ರೈಲ್ವೆ ಯೋಜನೆಗಳಿಗೆ 4,879 ಕೋಟಿ ರೂ. ಅನುದಾನ, ತುಮಕೂರಿನಲ್ಲಿ 7,725 ಕೋಟಿ ರೂ.ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ, ಈ ಮೂಲಕ 2.8 ಲಕ್ಷ ಉದ್ಯೋಗಾವಕಾಶ ಲಭಿಸಲಿದೆ. ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕಲ್ ಕಾರು ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ತೆರೆಯಲಿದೆ. ಕೊಚ್ಚಿ- ಮಂಗಳೂರು ಗ್ಯಾಸ್ ಪೈಪ್‌ಲೈನ್, ಉತ್ತರ ಕರ್ನಾಟಕ ಭಾಗದಲ್ಲಿ 21,000 ಕೋಟಿ ರೂ. ವೆಚ್ಚದಲ್ಲಿ 13 ಹೆದ್ದಾರಿ ನಿರ್ಮಾಣದ ಯೋಜನೆಗೆ ಮಂಜೂರಾತಿ, ಬೆಂಗಳೂರು-ಮಂಗಳೂರಿಗೆ ಸಂಪರ್ಕ ಕೊಂಡಿಯಾಗಿ ರುವ ಶಿರಾಡಿಯ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಇ-ಟೆಂಡರ್ ಮೂಲಕ ನಿವೇಶನ ಹಂಚಿಕೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇ-ಟೆಂಡರ್ ಮೂಲಕವೇ ನಿವೇಶನ, ಮಳಿಗೆ ಹಂಚಿಕೆ ಮಾಡಲಾಗುತ್ತಿದೆಯೇ ಹೊರತು ನೇರವಾಗಿ ಹಂಚಿಕೆ ಮಾಡಲು ಅವಕಾಶವಿಲ್ಲ. ಮೈಸೂರಿನ ಎಪಿಎಂಸಿಯಲ್ಲಿ ನೇರವಾಗಿ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಕೆಲವರು ವ್ಯವಹಾರ ಮಾಡುತ್ತಿದ್ದಾರೆ ಎಂಬ ದೂರು ನನ್ನ ಗಮನಕ್ಕೆ ಬಂದಿವೆ. ಎಪಿಎಂಸಿಗಳಲ್ಲಿ ಇ-ಟೆಂಡರ್ ನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಕೊಡಲು ಅವಕಾಶ ವಿದೆ. ನೇರವಾಗಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಮೈಸೂರು ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮ ಶೇಖರ್ ಇದ್ದರು.