ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಥಮ ಹಿಂದೂ ದೇವಸ್ಥಾನದ ಸ್ಥಳಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ (ಆಗಸ್ಟ್ 31) ಭೇಟಿ ನೀಡಿದ್ದು, ಇದೊಂದು ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಯ ಸಂಕೇತವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:ನವೆಂಬರ್ 2ರಂದು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮೋದಿ ಆಗಮನ: ಸಿಎಂ ಬೊಮ್ಮಾಯಿ ಮಾಹಿತಿ
ಮೂರು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭೇಟಿಗಾಗಿ ಬುಧವಾರ ಸಚಿವ ಜೈಶಂಕರ್ ಅವರು ಅಬುಧಾಬಿಗೆ ಆಗಮಿಸಿದ್ದರು. ಇಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಲು ಶ್ರಮಿಸಿರುವ ಭಾರತೀಯರನ್ನು ಜೈಶಂಕರ್ ಶ್ಲಾಘಿಸಿದರು.
ಗಣೇಶ ಚತುರ್ಥಿ ದಿನದಂದು ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ದೇವಾಲಯ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಭಕ್ತಿಭಾವದಿಂದ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತ್ವರಿತಗತಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ. ಈ ಸಂದರ್ಭದಲ್ಲಿ ಭಕ್ತರು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಭೇಟಿಯಾಗಿರುವುದಾಗಿ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಅಬುಧಾಬಿಯಲ್ಲಿ ಸುಮಾರು 55,000 ಚದರ ಅಡಿ ಮೀಟರ್ ವಿಸ್ತೀರ್ಣದ ಭೂಮಿಯಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದೆ. ಇದು ಮಧ್ಯ ಏಷ್ಯಾದಲ್ಲಿನ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಲಿದೆ ಎಂದು ವರದಿ ತಿಳಿಸಿದೆ.
ಪ್ರಮುಖ್ ಸ್ವಾಮಿ ಮಹಾರಾಜ್ ಈ ದೇವಾಲಯದ ಸಂಸ್ಥಾಪಕರಾಗಿದ್ದು, 2018ರಲ್ಲಿ ಅಬುಧಾಬಿಯಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನಡೆಸಲಾಗಿತ್ತು. 2024ರಲ್ಲಿ ಹಿಂದೂ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವರದಿ ವಿವರಿಸಿದೆ.