ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಸೋಮವಾರ ಬೆಳಗ್ಗೆ ಆನೆ ದಾಳಿಗೊಳಗಾಗಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಸಂಜೆ ವೇಳೆ ಭೇಟಿ ನೀಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು, ಮೃತ ರಂಜಿತಾ ಅವರ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ತಿಳಿಸಿದರು.
ಕಾಡಾನೆ ಸೆರೆಹಿಡಿಯಲು ಮೈಸೂರಿನಿಂದ ಸಾಕು ಅನೆಗಳನ್ನು ತರಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಮೈಸೂರಿನಿಂದ ಆನೆಗಳು ಬರುತ್ತಿದ್ದು, ರಾತ್ರಿ ವೇಳೆಗೆ ಅಗಮಿಸುವ ನಿರೀಕ್ಷೆಯಿದೆ. ಬಳಿಕ ಸೆರೆಹಿಡಿಯುವ ಕಾರ್ಯ ನಡೆಸಲಾಗುವುದು ಎಂದ ಅವರು ಮೃತರ ಮನೆಯವರಿಗೆ ಸರಕಾರದ ವತಿಯಿಂದ ಪರಿಹಾರ ನೀಡಲಾಗುತ್ತದೆ ಎಂದರು. ರಾಜಕೀಯ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು ಜೊತೆಗಿದ್ದರು.
ಆನೆ ದಾಳಿಯಲ್ಲಿ ರೆಂಜಿಲಾಡಿ ಗ್ರಾಮದ ನೈಲದ ರಂಜಿತಾ (24) ಹಾಗೂ ರಮೇಶ್ ರೈ ನೈಲ (58) ಎಂಬರು ಮೃತರಾಗಿದ್ದರು.
ಇದನ್ನೂ ಓದಿ: ಉಳ್ಳಾಲ: ಹರೇಕಳದ ಒಂಟಿ ಮನೆಯಲ್ಲಿ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ