Advertisement

ಬಂದರುಗಳಲ್ಲಿ ಹೂಳೆತ್ತಲು ಯೋಜನೆ: ಸಚಿವ ಎಸ್‌. ಅಂಗಾರ

01:05 AM Dec 22, 2022 | Team Udayavani |

ಬೆಳಗಾವಿ: ಮಂಗಳೂರು ಮತ್ತು ಕಾರವಾರ ಬಂದರಿನಲ್ಲಿ ಹೂಳು ತೆಗೆಯುವ ಕಾರ್ಯ ಶೀಘ್ರ ಆರಂಭವಾಗಲಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ 69 ಕೋಟಿ ರೂ. ಮೊತ್ತದ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು, ಮಲ್ಪೆ ಮತ್ತು ಕಾರವಾರ ಬಂದರುಗಳ ಅಭಿವೃದ್ಧಿ ಮತ್ತು ಹೂಳು ತೆಗೆಯುವುದಕ್ಕೆ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಕಾರವಾರ ವಾಣಿಜ್ಯ ಬಂದರಿನಲ್ಲಿ ಅಗತ್ಯ ಹಾಗೂ ಅನುದಾನದ ಲಭ್ಯತೆಗೆ ತಕ್ಕಂತೆ 4-5 ವರ್ಷಕ್ಕೊಮ್ಮೆ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 2017-18ನೇ ಸಾಲಿನಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ಕಾರವಾರ ಬಂದರಿನ ವಾಫ್ìನ ಮುಂಭಾಗ, ಟರ್ನಿಂಗ್‌ ಸರ್ಕಲ್‌, ನೌಕಾಯಾನ ಚಾನೆಲ್‌ಗ‌ಳನ್ನು ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ 40 ಕೋಟಿ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

2013-14ರಲ್ಲಿ ಮಂಗಳೂರು ಹಳೆ ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲು ಮತ್ತು ಕಡತ್‌ಪಳ್ಳಿ ಎಂಬಲ್ಲಿ 4.41 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಅದೇ ರೀತಿ 2018-19ನೇ ಸಾಲಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹಳೆ ಮಂಗಳೂರು ವಾಣಿಜ್ಯ ಬಂದರು ಧಕ್ಕೆ ಮುಂಭಾಗ ಹೂಳೆತ್ತಲಾಗಿದೆ. ಈ ವರ್ಷ ಬಿಎಂಡಿ ಫೆರಿಯಿಂದ ಬೆಂಗ್ರೆವರೆಗೆ 95 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಚಾಲ್ತಿಯಲ್ಲಿದ್ದು, ಹಳೆ ಮಂಗಳೂರು ವಾಣಿಜ್ಯ ಬಂದರಿನ ಬೆಂಗ್ರೆ ಬದಿಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ಮಲ್ಪೆ ಮೀನುಗಾರಿಕಾ ಬಂದರಿಗೆ ಹೊಂದಿಕೊಂಡಿರುವ ಉದ್ಯಾವರ ನದಿಯ ಸೇತುವೆ ವರೆಗೆ 2012-13ನೇ ಸಾಲಿನಲ್ಲಿ 5.50 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. 2016-17ನೇ ಸಾಲಿನಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲಾಗಿದೆ. ಹಾಗೆಯೇ 2019-20 ಮತ್ತು 2020-21ನೇ ಸಾಲಿನಲ್ಲಿ ಮಲ್ಪೆ ಬಂದರಿನಲ್ಲಿ ಹೂಳಿಗೆ ಸಿಲುಕಿ ಮೂವರು ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬದವರಿಗೆ ಒಟ್ಟು 9 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರಿಕೆ ದೋಣಿಗಳು ಸುಗಮವಾಗಿ ಚಲಿಸಲು ಅನುಕೂಲವಾಗುವಂತೆ ನೇವಿಗೇಷನ್‌ ಚಾನಲ್‌ಗ‌ಳಲ್ಲಿ ಹಂತಹಂತವಾಗಿ ಹೂಳೆತ್ತಲು 20 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದ್ದು, ಆ ಕುರಿತು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಾರವಾರ ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿಗೆ 3.50 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೆ ಸರಕಾರ ಅನುಮೋದನೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಜೆಟ್ಟಿ ಮುಂಭಾಗದಲ್ಲಿ ಹೂಳೆತ್ತಲು 3.90 ಕೋಟಿ ರೂ. ಹಾಗೂ ಉಡುಪಿ ತಾಲೂಕು ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ ಮತ್ತು ನೇವಿಗೇಷನ್‌ ಚಾನಲ್‌ನಲ್ಲಿ ಹೂಳೆತ್ತಲು 3 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Advertisement

ಒಳನಾಡು ಮೀನುಗಾರಿಕೆಗೆ ಇನ್ನಷ್ಟು ಒತ್ತು
ಬೆಳಗಾವಿ: ಆಲಮಟ್ಟಿ ಹಿನ್ನೀರು ಸಹಿತ ಒಳನಾಡು ಮೀನುಗಾರಿಕೆ ಇನ್ನಷ್ಟು ವೃದ್ಧಿಸಲು ಕ್ರಮ ವಹಿಸುವುದಾಗಿ ಮೀನುಗಾರಿಕೆ ಸಚಿವ ಎಸ್‌.ಅಂಗಾರ ಹೇಳಿದರು.

ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಳನಾಡ ಮೀನುಗಾರಿಕೆಗೆ 40 ಕೋಟಿ ಮೀನುಮರಿ ಉತ್ಪಾದನೆ ಯಾಗಬೇಕಿದ್ದು, ಸದ್ಯಕ್ಕೆ 20 ಕೋಟಿ ಉತ್ಪಾದನೆಯಾಗುತ್ತಿದೆ. ಪ್ರಸ್ತುತ 90 ಮೀನು ಮರಿ ಉತ್ಪಾದನ ಕೇಂದ್ರಗಳಿದ್ದು, ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ ಇರುವ ಕೇಂದ್ರಗಳಲ್ಲಿ ಮರಿಗಳನ್ನು ಹೆಚ್ಚೆಚ್ಚು ಉತ್ಪಾದಿಸಲು ಯೋಜಿಸಲಾಗಿದೆ. ಅಲ್ಲದೇ ಮೀನುಗಾರಿಕೆ ಹೆಚ್ಚಿಸಲು ಮೀನಗಾರರಲ್ಲಿ ಜಾಗೃತಿ ಮೂಡಿಸಿ, ಅವರಿಗೆ ಸರಕಾರದ ಸೌಲಭ್ಯಗಳು ಮತ್ತು ಕೊಡುಗೆಗಳ ಕುರಿತು ಜಾಗೃತಿ ತರಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಆದರೆ ಆಲಮಟ್ಟಿ ಹಿನ್ನಿರಿನಲ್ಲಿ ಮೀನುಗಾರಿಕೆಗೆ ಅವಕಾಶವಿದ್ದು, ಅಲ್ಲಿ 20 ಎಕರೆ ಜಾಗ ಇದ್ದು ಅಲ್ಲಿಯೇ ಪ್ರತ್ಯೇಕವಾಗಿ ಮೀನು ಮರಿ ಉತ್ಪಾದನ ಕೇಂದ್ರ ಆರಂಭಿಸ ಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next