ಉಡುಪಿ: ನಾನು ಕೆಪಿಜೆಪಿಯ ಸ್ವತಂತ್ರ ಶಾಸಕ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಏಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿರುವ ನಾನು ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದೇನೆ. ನನಗೆ ಬಿಜೆಪಿಯಿಂದ ಆಹ್ವಾನ ಬಂದಿಲ್ಲ. ಸದ್ಯಕ್ಕಂತೂ ಬಿಜೆಪಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಸಚಿವ ಆರ್. ಶಂಕರ್ ಹೇಳಿದ್ದಾರೆ.
ಗುರುವಾರ ಖಾಸಗಿ ಕಾರ್ಯಕ್ರಮಕ್ಕಾಗಿ ಉಡುಪಿಗೆ ಆಗಮಿಸಿದ ವೇಳೆ ಸಕೀಟ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಮುಂಬೈಗೆ ತೆರಳಿದ್ದೇನೆ, ಇನ್ನೆಲ್ಲಿಗೋ ತೆರಳಿದ್ದೇನೆ ಎಂಬೆಲ್ಲ ವರದಿ ಪ್ರಸಾರವಾಗುತ್ತಿದೆ. ನಾನು ಉಡುಪಿಯಲ್ಲಿಯೇ ಇದ್ದೇನೆ. ಬ್ರಹ್ಮಾವರದಲ್ಲಿ ಆಪ್ತರ ಮದುವೆಗೆ ಆಗಮಿಸಿದ್ದೇನೆ. ನಿನ್ನೆಯ ತನಕ ಕೊಪ್ಪಳದಲ್ಲಿದ್ದೆ. ಬೇರೆ ಯಾವ ವಿಚಾರವೂ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದರು.
ಮೈತ್ರಿ ಸರಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ ಎಂದು ವಿರೋಧಿಗಳು ಎನ್ನುತ್ತಾರೆ. ಆದರೆ ಸರಕಾರ ಎದ್ದಿದೆ, ಜನರ ಕೆಲಸವನ್ನು ಮಾಡುತ್ತಿದೆ. ಐದು ವರ್ಷಗಳ ಕಾಲ ಸ್ಥಿರವಾಗಿರುತ್ತದೆ ಎಂದರು.
ಉತ್ತರ ಕರ್ನಾಟಕದಲ್ಲಿ ಮೊಹರಂ ಆಚರಣೆ ವೇಳೆ ಮರಗಳಿಗೆ ಬೆಂಕಿ ಹಾಕುವ ವಿಚಾರ ತಿಳಿದಿಲ್ಲ. ಕಾನೂನು ಮೀರಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.ಇದೇ ಸಂದರ್ಭ ಬನ್ನಂಜೆಯಲ್ಲಿ ಉಡುಪಿ ಸರಕಾರಿ ಬಸ್ ನಿಲ್ದಾಣ ನಿರ್ಮಾಣ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಎಷ್ಟು ಸಾಧ್ಯವೋ ಅಷ್ಟು ಮರ ಉಳಿಸಿಕೊಂಡು ಯೋಜನೆ ಮುಂದುವರಿಸುವಂತೆ ಚರ್ಚಿಸಲು ಸೂಚಿಸಿದ ಅವರು, ಕಡಿಯುವ ಪ್ರತೀ ಮರಕ್ಕೆ 10 ಪಟ್ಟು ಮೌಲ್ಯವನ್ನು ಅರಣ್ಯ ಇಲಾಖೆಗೆ ಸಂಗ್ರಹಿಸಲು, ಉಳಿಯುವ ಜಾಗದಲ್ಲಿ ಗಿಡ ನೆಡಲು ಹೇಳಿದರು.