ತಿ.ನರಸೀಪುರ: ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಭಾನುವಾರ ನಡೆಯಲಿರುವ ಕುಂಭಮೇಳದ ಅಂತಿಮ ಸಿದ್ಧತೆಯನ್ನು ಶನಿವಾರ ರಾತ್ರಿವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪರಿಶೀಲಿಸಿದರು. ಶನಿವಾರ ಸಂಜೆ ಸಂಗಮಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಸಚಿವರು, ಕುಂಭಮೇಳದ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದರು.
ನಂತರ ಸಭಾಮಂಟಪ, ಯಾಗ ಮಂಟಪ, ಗಣ್ಯರ ವಸತಿ ಗೃಹ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದೇವೇಗೌಡ, ಕುಂಭಮೇಳವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪರಮ ಪೂಜ್ಯರು ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕುಂಭಮೇಳಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಒದಗಿಸುವಂತೆ ಆದೇಶ ನೀಡಿದ್ದರು. ಆದರಂತೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಶ್ರೀಕ್ಷೇತ್ರದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಅಧಿಕಾರಿಗಳು ತಮಗೆ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
5ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ: ಮುಖ್ಯಮಂತ್ರಿಗಳು, ಸಚಿವರು, ಸಂಸದರಿಗೆ ಆಹ್ವಾನ ಪತ್ರ ನೀಡಲಾಗಿದೆ. ಮಹೋದಯ ಪುಣ್ಯ ಸ್ನಾನದ ದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಚ್.ಡಿ.ರೇವಣ್ಣ, ಸಾ.ರಾ. ಮಹೇಶ್, ಡಿ.ಸಿ.ತಮ್ಮಣ್ಣ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಈ ಕುಂಭಮೇಳಕ್ಕೆ 5 ರಿಂದ 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಕನಿಷ್ಠ 5 ಲಕ್ಷ ಮಂದಿಯಂತೂ ಈ ಮೇಳದಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ಹೇಳಿದರು.
ವೀರಾ ಯೋಧರಿಗೆ ಶ್ರದ್ಧಾಂಜಲಿ: ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ತುತ್ತಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ದೇಶವನ್ನು ಕಾಯುವ ಯೋಧರು ತಮ್ಮ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ್ದಾರೆ.
ಉಗ್ರರ ಈ ದಾಳಿ ನಿಜಕ್ಕೂ ಅಮಾನವೀಯ ಹಾಗೂ ಖಂಡನೀಯ. ಇಂತಹ ಘಟನೆಗಳು ಮರುಕಳಿಸಬಾರದು. ಯೋಧರಿಗೆ ಸಂತಾಪ ಸೂಚಿಸೋಣ. ಇದೇ ವೇಳೆ ಕುಂಭಮೇಳ ಬಂದಿದೆ. ನಾಡಿನ ಜನರ ಕಲ್ಯಾಣಕ್ಕಾಗಿ ಈ ಉತ್ಸವದಲ್ಲಿ ಎಲ್ಲರೂ ಭಾಗವಹಿಸೋಣ ಎಂದು ಮನವಿ ಮಾಡಿದರು.
ಶಾಸಕ ಎಂ.ಅಶ್ವಿನ್‌ಕುಮಾರ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥನಂದ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್, ತಾಪಂ ಇಒ ಡಾ.ನಂಜೇಶ್, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಸದಸ್ಯ ಜಯಪಾಲ್ ಭರಣಿ, ಪುರಸಭಾ ಸದಸ್ಯರಾದ ಕಿರಣ್, ಟಿ.ಎಂ.ನಂಜುಂಡಸ್ವಾಮಿ, ಮುಖಂಡ ಸ್ವಾಮಿನಾಥ್‌ಗೌಡ, ಮರಯ್ಯ ಮತ್ತಿತರರು ಉಪಸ್ಥಿತರಿದ್ದರು.