ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಇಂದು ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಲ್ಲಿ ಬರ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಿ ರೈತರೊಂದಿಗೆ ಸಂವಾದ ನಡೆಸಿದರು. ರೈತರು ಅನುಭವಿಸುವ ಕಷ್ಟಗಳ ಕುರಿತು ಸಂವಾದ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು.
ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಬರ ವೀಕ್ಷಣೆಗೂ ಮುನ್ನ ರೈತರ ಜೊತೆ ಸಂವಾದ ನಡೆಸಿದ ಸಚಿವರಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಬಿತ್ತನೆ ಮಾಡಿದ್ದರೂ ಮಳೆ ಇಲ್ಲದೆ ಬೆಳೆ ಗ್ಯಾರಂಟಿ ಇಲ್ಲ. ನೀವು ಕೊಡುವ ಬರ ಪರಿಹಾರ ಚೆಕ್ ಕೇವಲ 100, 150 ರೂ. ಹೆಚ್ಚಿಗೆ ಎಂದರೆ 500ರೂ. ಕೊಟ್ಟರೆ ದೊಡ್ಡದು, ಇದು ಏನಕ್ಕೂ ಸಾಲದು. ಬೆಳೆಹಾನಿ ಮತ್ತು ಬರ ಪರಿಹಾರವು ರೈತರ ನಷ್ಟ ತುಂಬಿಕೊಡುವಂತಿರಬೇಕು. ನಮ್ಮ ದೊಡ್ಡಬಾದಗೆರೆ ಊರಿನ ರಸ್ತೆ 20 ವರ್ಷಗಳಿಂದ ಕಚ್ಚಾ ರಸ್ತೆಯಾಗಿದೆ, ದುರಸ್ತಿ ಮಾಡಬೇಕು ಎಂದು ರೈತ ರಾಮಚಂದ್ರ ಹೇಳಿದರು.
ಇನ್ನೋರ್ವ ರೈತ ದಾಸಪ್ಪ ಮಾತನಾಡಿ ಒಂದು ಎಕರೆಯಲ್ಲಿ ಕೃಷಿ ಮಾಡಬೇಕಾದರೆ ಕನಿಷ್ಠ 40ರೂ. ಸಾವಿರ ಬೇಕಾಗುತ್ತದೆ. ಅಷ್ಟು ಬಂಡವಾಳ ಹಾಕಿದರೂ ಕೈ ಸೇರುವುದು ಬಿಡಿಗಾಸು. ರೈತರಿಗೆ ಹೆಚ್ಚಿನ ಲಾಭ ಸಿಗುವಂತೆ ತಾವು ಮಾಡಬೇಕು ಎಂದರು.
ಪಹಣಿ ಇಲ್ಲದ ಎರಡು ಹಳ್ಳಿಗಳ ರೈತರು ಇದ್ದೇವೆ. ಹಕ್ಕು ಪತ್ರ ಸಿಕ್ಕಿಲ್ಲ, ಸುಮಾರು 40-50 ವರ್ಷಗಳಿಂದ ಅಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಹಾಗಾಗಿ, ಪಹಣಿ ಇಲ್ಲದ ನಮಗೆ ಬರ ಪರಿಹಾರ ಒದಗಿಸಬೇಕು ಎಂದು ಬೆಟ್ಟಹಳ್ಳಿಯ ರೈತ ಮುದ್ದುಕೃಷ್ಣ ಅವರು ಸಚಿವರಲ್ಲಿ ಮನವಿ ಮಾಡಿದರು.
ಸಚಿವ ರಾಮಲಿಂಗ ರೆಡ್ಡಿಗೆ ಶಾಸಕರಾದ ಇಕ್ಬಾಲ್ ಹುಸೇನ್, ಎಸ್. ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಒ ದಿಗ್ವಿಜಯ ಬೋಡ್ಕೆ ಸೇರಿದಂತೆ ಹಲವರು ಸಾಥ್ ನೀಡಿದರು.
ಇದನ್ನೂಓದಿ: Rickshaw pullerಗೆ ಮರಣದಂಡನೆ: 10 ವರ್ಷದ ಬಾಲಕಿ ಮೇಲೆ ದೈಹಿಕ ದೌರ್ಜನ್ಯ, ಕೊಲೆ