ಬೀದರ್: ದೇಶದಲ್ಲಿ ಫೋನ್ ಕದ್ದಾಲಿಕೆ ಕಂಡು ಹಿಡಿದ ಪಿತಾಮಹರೇ ಕಾಂಗ್ರೆಸ್ಸಿನವರು. ಯಾರು ಕದ್ದಾಲಿಕೆ ಮಾಡಿ ತನಿಖೆ ಎದುರಿಸುತ್ತಿದ್ದಾರೆ ಅವರ ಬಾಯಲ್ಲಿ (ಕಾಂಗ್ರೆಸ್) ಆರೋಪ ಕೇಳಿ ಬರುತ್ತಿರುವುದು ಆಶ್ಚರ್ಯಕರ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಇಂಥ ಕೆಲಸಕ್ಕೆ ಕೈ ಹಾಕುವುದಿಲ್ಲ, ಅದರ ಅನುಭವವೂ ನಮಗಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಅವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿ ಸೇರಿದಂತೆ ಹಲವರ ಫೋನ್ ಕದ್ದಾಲಿಕೆ ಆಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಫೋನ್ ಸೌಂಡ್ ಸರಿಯಾಗಿರದಿದ್ದರೆ ಶಿವಾಜಿ ನಗರದ ಒಳ್ಳೆ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ, ಅಥವಾ ಉತ್ತಮ ಕಂಪನಿಯ ಮೊಬೈಲ್ ಖರೀದಿಸಲಿ ಎಂದು ಸಲಹೆ ನೀಡಿದರು.
ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗಳಿಗೆ ವಿದೇಶಿ ಐಎಸ್‌ಐ ಸಂಘಟನೆಗಳೊಂದಿಗೆ ಲಿಂಕ್ ಇರುವುದು ತನಿಖೆಯಿಂದ ಗೊತ್ತಾಗಿದೆ. ಗಲಭೆ ಮೂಲಕ ಬೆಂಗಳೂರಿನಲ್ಲಿ ಭಯ ಹುಟ್ಟಿಸುವವರನ್ನು ಸರ್ಕಾರ ಬಗ್ಗು ಬಡಿದು ನ್ಯಾಯಾಂಗದ ಕಟಕಟ್ಟೆ ಹಚ್ಚಿಸುತ್ತೇವೆ. ಈ ಘಟನೆನಿಂದ ಕಾಂಗ್ರೆಸ್ ಪಕ್ಷ ಸಹ ಪಾಠ ಕಲಿಯಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರವಾಹ ಹಾನಿ ಪರಿಶೀಲನೆಗಾಗಿ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ: ಸಚಿವ ಅಶೋಕ್
ಡಿ.ಜೆ ಹಳ್ಳಿ ಘಟನೆ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದ ಘಟನೆ, ಹೊರತು ಕೋಮು ಗಲಭೆ ಅಲ್ಲ. ದಲಿತ ಶಾಸಕ, ಕಾರ್ಪೋರೇಟರ್ ಮತ್ತು ಎಸ್‌ಡಿಪಿಐ ಮೂರು ಸಂಘಟನೆ ನಡುವಿನ ಹೊಡೆದಾಟ. ಈ ಘಟನೆ ಮತ್ತು ಮೈಸೂರಿನ ಶಾಸಕ ತನ್ವೀರ್ ಸೇಠ್ ಹಲ್ಲೆ ಪ್ರಕರಣಕ್ಕೂ ಸ್ವಾಮತ್ಯತೆ ಕಂಡು ಬಂದಿದೆ. ಒಬ್ಬ ದಲಿತ ಶಾಸಕ ಮನೆ ಮೇಲೆ ಹಲ್ಲೆ ಘಟನೆಯನ್ನು ಖಂಡಿಸದ ಕೆಪಿಸಿಸಿ ಅಧ್ಯಕ್ಷರು ಕೇವಲ ನಮ್ಮ ಕಾರ್ಪೋರೇಟರ್ ಗಳನ್ನು ಏಕೆ ಬಂಧಿಸಿದ್ದೀರಿ ಎಂದಷ್ಟೇ ಕೇಳುತ್ತಾರೆ ಎಂದು ಸಚಿವ ಅಶೋಕ್ ಕಿಡಿಕಾರಿದರು.