ಬೆಂಗಳೂರು: ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ನಮ್ಮ ನಾಯಕರು. ನಮ್ಮಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ನಾವು ಯಡಿಯೂರಪ್ಪ ಪರ, ಅವರೇ ನಮ್ಮ ನಾಯಕರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಸರ್ಕಾರ ಒಂದು ವರ್ಷ ಪೂರೈಸಿದಾಗ ಮುಖ್ಯಮಂತ್ರಿ ದೆಹಲಿಗೆ ಹೋಗಿ ಶುಭಾಶಯ ಕೋರುವುದು ಸಂಪ್ರದಾಯ. ಆದರೆ, ಕೋವಿಡ್-19 ಇರುವುದರಿಂದ ಸಿಎಂ ಬಿಎಸ್ ವೈ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದರು.
ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆಗೆ ನಿರಾಕರಿಸಿದರೆ ಅಂತ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 8 ಆಸ್ಪತ್ರೆಗಳಿಗೆ ನೊಟೀಸ್ ಕೊಟ್ಟಿದ್ದೇವೆ. ಅವರ ಒಪಿಡಿ ಬಂದ್ ಮಾಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಆಸ್ಪತ್ರೆಗಳನ್ನು ಸಂಪೂರ್ಣ ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವೈದ್ಯರು ಕೋವಿಡ್ ವಾರಿಯರ್ಸ್ ಆದ ಮೇಲೆ ನೆಪ ಹೇಳಿ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ವೈದ್ಯರು ಮತ್ತು ನರ್ಸ್ ಕಡ್ಡಾಯವಾಗಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ತಪ್ಪಿಸಿಕೊಂಡರೆ ಅವರ ವಿರುದ್ಧವೂ ಕ್ರಮ ಕೈಗೊಳ್ಲಾಗುವುದು ಎಂದರು.
ಬೆಂಗಳೂರು ದಕ್ಷಿಣದಲ್ಲಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಯಾರೇ ರೋಗಿಗಳು ಈ ಆ್ಯಪ್ ಮೂಲಕ ಸಂಪರ್ಕ ಮಾಡಿದರೆ ಅವರಿಗೆ ತಕ್ಷಣ ವೈದ್ಯರು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ನೀಡುತ್ತಾರೆ ಎಂದು ಸಚಿವರು ಹೇಳಿದರು