ಕಲಬುರಗಿ: ಬಿಜೆಪಿ ಯಾವ- ಯಾವ ರಾಜ್ಯಗಳಲ್ಲಿ ಅಸಮರ್ಥ ನಾಯಕತ್ವವಿದೆಯೋ ಅಲ್ಲೆಲ್ಲ ರಾಜ ಭವನ ದುರ್ಬಳಿಕೆ ಮಾಡಿಕೊಳ್ಳಲಾಗುತ್ತೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳನಾಡು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರು ನಡೆದುಕೊಂಡ ಬಗೆ ಅವಲೋಕಿಸಿದರೆ ಸ್ಪಷ್ಟ ಅರಿವಿಗೆ ಬರುತ್ತದೆ. ಅದರಲ್ಲಿ ಈಗ ಕರ್ನಾಟಕವೂ ಸೇರಿದೆ ಎಂದರು.
ಕೇರಳದಲ್ಲಿ ರಾಜ್ಯಪಾಲರೇ ಧರಣಿಗೆ ಕುಳಿತ್ತಿರುವುದು, ಪಶ್ಚಿಮ ಬಂಗಾಳದಲ್ಲಿ ರಾಜ್ಯ ಪಾಲರೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣ ದಾಖಲಿಸುವಂತೆ ಹೇಳಿರುವುದು, ಮಹಾರಾಷ್ಟ್ರ ದಲ್ಲಿ ನಸುಕಿನ ಜಾವ ಪ್ರಮಾಣ ವಚನ ಬೋಧಿಸಿರುವುದು ಹಾಗೂ ಕರ್ನಾಟಕದಲ್ಲಿ ಈಗ ಹಿಂದೆ ಮುಂದೆ ಅವಲೋಕಿಸದೇ ನೋಟಿಸ್ ನೀಡಿರುವುದು ಸೇರಿದಂತೆ ಇತರ ಪ್ರಕರಣಗಳು ರಾಜ ಭವನ ಬಿಜೆಪಿ ಕೈಗೊಂಬೆ ಎಂಬುದನ್ನು ನಿರೂಪಿಸುತ್ತವೆ. ಪ್ರಮುಖವಾಗಿ ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಪ್ರಾದೇಶಿಕ ಕಚೇರಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಸಚಿವ ಖರ್ಗೆ ಬಲವಾಗಿ ಅಪಾದಿಸಿದರು.
ಜುಲೈ 5 ರಂದು ಸಿಎಂ ಗೆ ರಾಜ್ಯಪಾಲರು ಪತ್ರ ಬರೆಯುತ್ತಾರೆ. ಮತ್ತೆ 15ನೇ ತಾರೀಖಿಗೆ ಮತ್ತೊಂದು ಪತ್ರ ಬರೆಯುತ್ತಾರೆ. 26 ರಂದು ಈ ಬಗ್ಗೆ ಸರ್ಕಾರ ನೂರು ಪುಟಗಳ ಉತ್ತರ ಸಲ್ಲಿಸಿದೆ. ಅದೇ ದಿನ ಅಬ್ರಾಹಂ ದೂರು ದಾಖಲಿಸಿದ ಕೂಡಲೇ ರಾಜ್ಯಪಾಲರು ಸಿಎಂ ಗೆ ನೋಟಿಸು ಕೊಡುತ್ತಾರೆ. ಸರ್ಕಾರದ ಉತ್ತರವನ್ನು ಕೂಡಾ ಪರಿಶೀಲನೆ ನಡೆಸದೆ, ಕೇವಲ ಖಾಸಗಿ ದೂರು ದಾಖಲಿಸಿದ ತಕ್ಷಣ ಶೋಕಾಸ್ ನೋಟಿಸು ನೀಡಲಾಗಿದೆ. ದೂರದಾರರ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ, ಪ್ರಕರಣವೊಂದರಲ್ಲಿಅವರಿಗೆ ಸುಪ್ರಿಂ ಕೋರ್ಟ್ ದಂಡ ಹಾಕಿದೆ. ಅಂತವರ ಮಾತು ರಾಜ್ಯಪಾಲರು ಕೇಳುತ್ತಾರೆ ಎಂದರೆ ಮೇಲಿನಿಂದ ಅವರಿಗೆ ಆದೇಶ ಬಂದಿದೆ. ರಾಜ್ಯಪಾಲರು ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜಭವನ ದುರಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿ ಹೋದ ಪ್ರಕರಣ ಹಿನ್ನೆಲೆಯಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು. ಡಿಸಿಎಂ ಅವರು ಭೇಟಿ ನೀಡಿದ್ದಾರೆ. ಜೊತೆಗೆ ಆಣೆಕಟ್ಟುಗಳ ಗಟ್ಟಿತನದ ಸಮೀಕ್ಷೆ ನಡೆಸಲಾಗುತ್ತದೆ ಎಂದರು.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ ಎಷ್ಟು ಆಣೆಕಟ್ಟುಗಳಿಗೆ ಭೇಟಿ ನೀಡಿದ್ದರು ? ಗಟ್ಟಿತನದ ಸಮೀಕ್ಷೆ ನಡೆಸಿದ್ದರ? ಎಂದು ಪ್ರಶ್ನಿಸಿದ ಸಚಿವರು ತಾಂತ್ರಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಏನಾದರೂ ಲೋಪದೋಷವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಮೊದಲ ಬೆಳೆಗೆ ನೀರಿನ ತೊಂದರೆ ಇಲ್ಲ ಎರಡನೆಯ ಬೆಳೆಗೂ ತೊಂದರೆಯಾಗದು. ತುಂಗಾಭದ್ರ ಡ್ಯಾಂಗೆ ಸಮನಾಂತರ ಸೇತುವೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಅಗತ್ಯ ಕ್ರಮ: ಮಹಾರಾಷ್ಟ್ರ ದಲ್ಲಿ ಆಣೆಕಟ್ಟುಗಳು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳ ಜೊತೆಗೆ ಕ್ರಮ ಕೈಗೊಂಡ ಕುರಿತು ಚರ್ಚಿಸಲಾಗುವುದು ಎಂದು ಸಚಿವ ಖರ್ಗೆ ಹೇಳಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಹಾಜರಿದ್ದರು.