ಬೀದರ್: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ತೀವ್ರ ಗಾಯದಿಂದ ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ಗಾಯಾಳುಗಳಿಗೆ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಲು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಅವರು ಶುಕ್ರವಾರ ನೆರವಾಗಿದ್ದಾರೆ.
ಜುಲೈ 8ರಂದು ಸಚಿವರು ಸ್ವಗ್ರಾಮದಿಂದ ಯಾದಗಿರಿ ಜಿಲ್ಲೆಗೆ ರಸ್ತೆ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಕಮಲನಗರ ತಾಲ್ಲೂಕಿನ ಸಂಗಮ ಸೇತುವೆ ಬಳಿ ತೀವ್ರ ಗಾಯವಾಗಿ ರಸ್ತೆ ಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸವಾರರನ್ನು ಕಂಡು ಸಚಿವರು ತಮ್ಮ ವಾಹನವನ್ನು ನಿಲ್ಲಿಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ:ಆಡಳಿತದ ವೇಗಕ್ಕೆ ಬೊಮ್ಮಾಯಿ ಸಂಪುಟದ ಸಚಿವರು ಕೈಜೋಡಿಸುತ್ತಿಲ್ಲ: ಎಚ್.ವಿಶ್ವನಾಥ್
ಚಿಕಿತ್ಸೆಗಾಗಿ ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಬೀದರ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ಅಪಘಾತಕ್ಕೆ ಒಳಗಾದ ಇಬ್ಬರು ವಾಹನ ಸವಾರರು ಹಾಲಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಆತಂಕಕ್ಕೆ ಒಳಗಾಗುವುದು ಬೇಡ, ಶೀಘ್ರ ಗುಣಮುಖರಾಗಿ ಬನ್ನಿ. ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ತಮ್ಮನ್ನು ಸಂಪರ್ಕಿಸಿ ಎಂದು ಗಾಯಾಳುಗಳಿಗೆ ಸಚಿವರು ಧೈರ್ಯ ತುಂಬಿದರು.
ಇದೇ ವೇಳೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಆಸ್ಪತ್ರೆಗೆ ಸಾಗಿಸಿರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.