Advertisement

ತನ್ನ ವೇತನವನ್ನೇ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಿದ ಸಚಿವ ಪ್ರಭು ಚವ್ಹಾಣ್

03:28 PM Aug 15, 2020 | keerthan |

ಬೀದರ್: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಗ್ರಶ್ರೇಣಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ತಮ್ಮ ವೇತನವನ್ನು ಬಹುಮಾನವಾಗಿ ವಿತರಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವ್ಹಾಣ್ ಅವರು ಬಹುಮಾನ ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ತೋರಿದಾಗ ಅವರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಸ್ಎಸ್ಎಲ್ ಸಿ ಮತ್ತು ಪಿಯುಸಿನಲ್ಲಿ ಉತ್ತಮ ಅಂಕಗಳನ್ನು ಪಡೆದ ತಾವುಗಳು ಇದೆ ರೀತಿ ಓದಬೇಕು. ಉತ್ತಮ ಹುದ್ದೆಗೆ ಏರಿ, ಸಮಾಜ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ನಮ್ಮ ಜಿಲ್ಲೆಯಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತಾವುಗಳು ತೋರಿಸಿ ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು ಎಂದು ಸಚಿವರು ಹೇಳಿದರು.

ದೇಶದ ಬದಲಾವಣೆಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ನಾಡಿನ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ ಸಚಿವರ ಉತ್ತಮ ಕಾರ್ಯಯೋಜನೆಯಿಂದ ಶಾಲಾ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ ಸಚಿವರು, ಸರ್ಕಾರಿ ಶಾಲೆಗಳು ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡೋಣ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಶೈಕ್ಷಣಿಕ ಕ್ಷೇತ್ರದ ಉತ್ತೇಜನಕ್ಕೆ ಶ್ರಮಿಸುತ್ತಿರುವ ಸಚಿವ ಚವ್ಹಾಣ್ ಅವರಿಗೆ ವಂದನೆಗಳು ಎಂದು ತಿಳಿಸಿದರು.  ಶಾಸಕರಾದ ರಹಿಂ ಖಾನ್ ಅವರು ಮಾತನಾಡಿ, ಶಿಕ್ಷಣಕ್ಕೆ ಬಹುದೊಡ್ಡ ತಾಕತ್ತಿದೆ.  ಬಡವನೂ ದೊಡ್ಡ ಸ್ಥಾನದಲ್ಲಿ ಇರುವಂತೆ ಮಾಡುವುದು ಹಣವಲ್ಲ, ಶಿಕ್ಷಣದಿಂದ ಮಾತ್ರ ಅದು ಸಾಧ್ಯವಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ: ಕೊಯ್ನಾ ಜಲಾಶಯದ ಬಳಿ ಭೂಕಂಪನ: ಆತಂಕದಲ್ಲಿ ನದಿ ತೀರದ ಜನತೆ

ಎಂಎಲ್.ಸಿ ರಘುನಾಥ ಮಲ್ಕಾಪುರೆ ಮಾತನಾಡಿ, ಓದಲು ಸಹಕಾರ ಕೊಡುವ ಮತ್ತು ಬೆನ್ನು ತಟ್ಟುವವರು ಇಂದಿನ ವಿದ್ಯಾರ್ಥಿಗಳಿಗೆ ಬೇಕಾಗಿದ್ದಾರೆ. ಅಂತಹ ಕೆಲಸವನ್ನು ಸಚಿವ ಚವ್ಹಾಣ್ ಅವರು ಮಾಡಿದ್ದಾರೆ. ಇಂತಹ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮುಂದುವರೆಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಮಾತನಾಡಿ, ನಮ್ಮಿಂದ ಹಣವನ್ನು ಯಾರಾದರು ಕಿತ್ತುಕೊಳ್ಳಬಹುದು. ಆದರೆ, ಓದಿ ತಿಳಿದುಕೊಂಡ ಜ್ಞಾನವನ್ನು ಯಾರಿಂದಲೂ ಕಿತ್ತು ಕೊಳ್ಳಲಾಗದು. ಪ್ರಯತ್ನ ಸತತವಾಗಿದ್ದರೆ ಮಾತ್ರ ಗೆಲುವು ಸಾಧ್ಯವಾಗಲಿದೆ. ಶಿಕ್ಷಣದಿಂದ ಮಾತ್ರ ನಾವು ದೊಡ್ಡ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ನಿಮ್ಮೊಳಗಿನ ಪ್ರತಿಭೆಯನ್ನು ನಂಬಿ ನೀವು ಪ್ರಯತ್ನಿಸಿದರೆ ಖಂಡಿತಾ ನಿಮಗೆ ಗೆಲುವು ಸಿಗಲಿದೆ ಎಂದು ತಿಳಿಸಿದರು.

ಸನ್ಮಾನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿನಲ್ಲಿ ಇಡೀ ಜಿಲ್ಲೆಗೆ ಮತ್ತು ಆಯಾ ತಾಲೂಕುಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇದೆ ವೇಳೆ ಸಚಿವರು ಬಹುಮಾನ ನೀಡಿ ಸನ್ಮಾನಿಸಿದರು. ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ನಾಗೇಶ ಡಿ.ಎಲ್, ಪ್ರಾದೇಶಿಕ  ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ ಎಚ್.ಸಿ., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಮೇಶ ಬೆಜಗಂ, ಶಾಹಿನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್ ಮತ್ತು ಸಾಧಕ ವಿದ್ಯಾರ್ಥಿಗಳ ಪಾಲಕರು ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next