ವಿಧಾನಸಭೆ:ಕುರಿ-ಮೇಕೆ ಮೃತಪಟ್ಟರೆ ಸಾಕಾಣಿಕೆದಾರರಿಗೆ ಅನುಗ್ರಹ ನೀಡುತ್ತಿರುವ ಪರಿಹಾರ ಮೊತ್ತ ಐದು ಸಾವಿರ ರೂ.ನಿಂದ ಹತ್ತು ಸಾವಿರ ರೂ.ವರೆಗೆ ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕುರಿ-ಮೇಕೆ ಮೃತಪಟ್ಟರೆ ನೀಡುತ್ತಿರುವ ಐದು ಸಾವಿರ ರೂ. ಮೊತ್ತ ಕಡಿಮೆ ಎಂಬ ಭಾವನೆ ಇದೆ. ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಬಂಡೆಪ್ಪ ಕಾಶೆಂಪುರ್, ಕೊರೊನಾ ಸಂದರ್ಭದಲ್ಲಿ ಕುರಿ-ಮೇಕೆ ಮೃತಪಟ್ಟ ಪ್ರಕರಣಗಳಲ್ಲ ಇದುವರೆಗೂ ಪರಿಹಾರ ಕೊಟ್ಟಿಲ್ಲ. ಐದು ಸಾವಿರ ರೂ. ಪರಿಹಾರ ಮೊತ್ತ ಏನೇನೂ ಸಾಕಾಗುವುದಿಲ್ಲ. ಹತ್ತು ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಬಿಜೆಪಿಯ ರಾಜುಗೌಡ ಸಹ ಧ್ವನಿಗೂಡಿಸಿ ನಾನೂ ಕುರಿ-ಮೇಕೆ ಸಾಕುತ್ತೇನೆ. ನನ್ನದೇ ನೂರಾರು ಕುರಿ ಮೃತಪಟ್ಟಿವೆ.ನಾನೇನೋ ಭರಿಸುತ್ತೇನೆ. ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುವ ಬಡವರು ಏನು ಮಾಡುತ್ತಾರೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ಮೊತ್ತ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಾಕಿ ಇರುವ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.