Advertisement

ಇಲಾಖೆಯ ತುರ್ತು ಸಭೆ ನಡೆಸಿದ ಸಚಿವ ಪ್ರಭು ಚವ್ಹಾಣ್

06:51 PM Jun 08, 2021 | Team Udayavani |

ಬೆಂಗಳೂರು ; ಕಾಲುಬಾಯಿ ಲಸಿಕೆ, ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆ ಭರ್ತಿ ಹಾಗೂ ಗೋಶಾಲೆಗಳಿಗೆ ಸಂಬಂಧಿಸಿದಂತೆ ತುರ್ತು ಸಭೆ ನಡೆಸಿದ ಸಚಿವರು ನಿರೀಕ್ಷಿತ ಮಟ್ಟದಲ್ಲಿ ಈ ವಲಯಗಳಲ್ಲಿ ಕೆಲಸ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದರು.

Advertisement

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವರು ನಿರ್ದೇಶಿಸಿದ ಮಟ್ಟದಲ್ಲಿ ಕೆಲಸ ಮಾಡಲು ಆಗದಿದ್ದರೆ ಕುರ್ಚಿ ಖಾಲಿ ಮಾಡಿ, ನಿಮ್ಮಿಂದ ಇಲಾಖೆಯ ಅಭಿವೃದ್ಧಿ ಕೆಲಸ ಕುಂಠಿತವಾದರೆ ನಾನು ಸಹಿಸುವುದಿಲ್ಲ ಎಂದು ಸಚಿವರು ನಿರ್ದೇಶಕರು ಮತ್ತು ಆಯುಕ್ತರ ಮೇಲೆ ಗರಂ ಆದರು.

ರಿಂಗ್ ವ್ಯಾಕ್ಸಿನ್ ಗೆ ಆದೇಶ

ವಿಕಾಸಸೌಧದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ “ರಿಂಗ್ ವ್ಯಾಕ್ಸಿನ್” ನಡೆಸಲು ಅಧಿಕಾರಿಗಳಿಗೆ ಆದೇಶಿಸಿದರು. ರೋಗೋದ್ರೇಕ ಕಂಡುಬಂದ ೫ ರಿಂದ ೧೦ ಕಿ.ಮೀ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಲು ಸಚಿವರು ಸೂಚಿಸಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ರೋಗೋದ್ರೇಕ ಕಂಡುಬಂದರೆ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ತಿಳಿಸಿ ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಾಲುಬಾಯಿ ರೋಗಕ್ಕೆ ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಹಾಗೂ ಕೆ.ಎಂ.ಎಫ್ ಸಿಬ್ಬಂದಿಯನ್ನು ಬಳಸಿಕೊಂಡು ಲಸಿಕೆ ನೀಡಲಾಗುವುದು. ಸಿಬ್ಬಂದಿಗಳ ತೀವ್ರ ಕೊರತೆಯಿದ್ದರು ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Advertisement

ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ

ಕೋವಿಡ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ೬೧ ಪಶುವೈದ್ಯಾಧಿಕಾರಿಗಳು, ೩೨ ಪಶುವೈದ್ಯಕೀಯ ಪರೀಕ್ಷಕರು ಹಾಗೂ 83 ಪಶುವೈದ್ಯಕೀಯ ಸಹಾಯಕರ ಹುದ್ದೆಗೆ ತಡೆ ನೀಡಲಾಗಿತ್ತು. ಸದ್ಯ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಸಲು ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಈ ಅವಧಿಯಲ್ಲಿ ಪ್ರಕ್ರಿಯೆ ಮುಗಿಯದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹೊಸ ಗೋಶಾಲೆಗಳಿಗೆ ಕ್ರಿಯಾ ಯೋಜನೆ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರದಲ್ಲಿ ಜಿಲ್ಲೆಗೊಂದು ಗೋಶಾಲೆ ಮಾಡಲು ಉದ್ದೇಶಿಸಿದ್ದು ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 30 ಜಿಲ್ಲೆಗಳಲ್ಲಿ ಹೊಸ ಗೋಶಾಲೆಗಳನ್ನು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರದಿಂದ ರೂ.೧೫ ಕೋಟಿ ಅನುದಾನ ನಿಗದಿಯಾಗಿದ್ದು ಅದರಲ್ಲಿ ರೂ.೭.೫೦ ಕೋಟಿ ಅನುದಾನ 5ಬಿಡುಗಡೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ಗೋಶಾಲೆ ನಿರ್ಮಾಣ ಮಾಡಲು ರೂ.೫೦ ಲಕ್ಷ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿನ 188 ಖಾಸಗಿ ಗೋಶಾಲೆಗಳಿಗೆ ಮೇ ಅಂತ್ಯದವರೆಗೆ ರೂ.೧೮.೫೦ ಲಕ್ಷ ಅನುದಾನವನ್ನು ನೀಡಲಾಗಿದೆ. 2021-22 ನೇ ಸಾಲಿನಲ್ಲಿ ಪಿಂಜರಾಪೋಲ್ ಗೋಶಾಲೆಗಳಿಗೆ ರೂ.೨೦೫.೦೫ ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಸಮಸ್ಯೆ ಆಲಿಸಲು ವಾರ್ ರೂಮ್ ಸಹ ತಯಾರಾಗಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸದ್ಯದಲ್ಲೇ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿ ನಡೆಯುತ್ತಿದ್ದು ಉಳಿದ 15 ಜಿಲ್ಲೆಗಳಲ್ಲಿ ಪಶುಸಂಜೀವಿನಿಗೆ ಭಾರಿ ಬೇಡಿಕೆಯಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಉಳಿದ ಜಿಲ್ಲೆಗಳಿಗೆ ನೀಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ಬಸವರಾಜೇಂದ್ರ, ನಿರ್ದೇಶಕ ಶಿವರಾಮ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next