Advertisement

ಜಾನುವಾರುಗಳ ಚಿಕಿತ್ಸೆಗೆ 275 ಆ್ಯಂಬುಲೆನ್ಸ್‌ ಖರೀದಿ: ಸಚಿವ ಪ್ರಭು ಚವ್ಹಾಣ್‌

09:31 PM Mar 16, 2022 | Team Udayavani |

ಬೆಂಗಳೂರು: ಜಾನುವಾರುಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿ ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದರಂತೆ 275 ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್‌ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಮುನಿರಾಜು ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಚಾರಿ ಚಿಕಿತ್ಸಾ ವಾಹನಗಳಿಗೆ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರಕಾರ ನೀಡುತ್ತಿದ್ದು, 275 ವಾಹನಗಳ ಖರೀದಿಗೆ 43.83 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಇದಲ್ಲದೆ ಪಶು ಸಂಜೀವಿನಿ ಯೋಜನೆಯಡಿ ಈಗಾಗಲೇ ರಾಜ್ಯದ ಅನುದಾನದಲ್ಲಿ 15 ಜಿಲ್ಲೆಗಳಲ್ಲಿ 15 ಆ್ಯಂಬುಲೆನ್ಸ್‌ ಗಳನ್ನು ಖರೀದಿಸಲಾಗಿದೆ. ಬೀದರ್‌, ರಾಯಚೂರು, ಕಲಬುರಗಿ, ಯಾದಗಿರಿ, ಧಾರವಾಡ, ವಿಜಯಪುರ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಆ್ಯಂಬುಲೆನ್ಸ್‌ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.

ಕೃಷಿ ವ್ಯಾಪ್ತಿಗೆ ಕೋಳಿ ಸಾಕಾಣಿಕೆ
ರಾಜ್ಯಾದ್ಯಂತ ರೈತರು ಉಪಕಸುಬನ್ನಾಗಿ ಹಾಗೂ ಕೆಲವು ರೈತರು ಗರಿಷ್ಠ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. 1961ರ ಕರ್ನಾಟಕ ಭೂಸುಧಾರಣೆ ಕಾಯ್ದೆ 2(1)(ಡಿ) ಅಡಿಯಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆ ಎಂದು ಹೇಳಲಾಗಿದೆ. ಕೋಳಿ ಸಾಕಾಣಿಕೆಯನ್ನು ಪೂರ್ಣಪ್ರಮಾಣದಲ್ಲಿ ಕೃಷಿ ವ್ಯಾಪ್ತಿಗೆ ತರುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಸದಸ್ಯ ಎಂ.ಎಲ್‌. ಅನಿಲ್‌ ಕುಮಾರ್‌ ಪ್ರಶ್ನೆಗೆ ಸಚಿವ ಪ್ರಭು ಚವ್ಹಾಣ್‌ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next