Advertisement

ಪೌರಾಡಳಿತ ಸಚಿವ ಶಿವಳ್ಳಿ ವಿಧಿವಶ

12:30 AM Mar 23, 2019 | Team Udayavani |

ಹುಬ್ಬಳ್ಳಿ: ಪೌರಾಡಳಿತ ಸಚಿವ ಮತ್ತು ಧಾರವಾಡ ಜಿಲ್ಲೆ ಕುಂದಗೋಳ ಕಾಂಗ್ರೆಸ್‌ ಶಾಸಕ ಚೆನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಸಿ.ಎಸ್‌. ಶಿವಳ್ಳಿ) ಶುಕ್ರವಾರ ಅಪರಾಹ್ನ 1.45ರ ಸುಮಾರಿಗೆ ತೀವ್ರ ಹೃದ ಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದರು.

Advertisement

ಬೆಳಗ್ಗೆ ಹುಬ್ಬಳ್ಳಿಯಲ್ಲಿನ ತನ್ನ ನಿವಾಸದಲ್ಲಿ ಕುಂದಗೋಳ ಕ್ಷೇತ್ರದಿಂದ ಬಂದ ಜನರೊಂದಿಗೆ ಚರ್ಚೆ ಯಲ್ಲಿದ್ದಾಗ, ಯಾಕೋ ಚಳಿಯಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಕುಟುಂಬದವರು ಕಿಮ್ಸ್‌ ವೈದ್ಯರಿಗೆ ಮಾಹಿತಿ ನೀಡಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾಂತಿ ಮಾಡಿ ಕೊಂಡು ಕುಸಿದು ಬಿದ್ದರು. ಇದೇ ವೇಳೆ ತೀವ್ರ ಹೃದಯಾ ಘಾತ ವಾಗಿದೆ ಎನ್ನಲಾಗುತ್ತಿದೆ. ಕಿಮ್ಸ್‌ ವೈದ್ಯರು ಸಚಿವರ ನಿವಾಸಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಲ್ಲದೆ, ತತ್‌ಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಗೋಕುಲ ರಸ್ತೆಯ ಲೈಫ್ಲೈನ್‌ ಆಸ್ಪತ್ರೆಯಲ್ಲಿ ಸಚಿವರಿಗೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಅಪರಾಹ್ನ 1.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಹೃದಯ ಸಮಸ್ಯೆ ಹೊಂದಿದ್ದರು.

ಸಿ.ಎಸ್‌.ಶಿವಳ್ಳಿ ಅವರಿಗೆ ಹೃದಯ ಸಮಸ್ಯೆ ಇತ್ತು. 2017ರಲ್ಲಿ ತೀವ್ರ ಅಸ್ವಸ್ಥರಾಗಿ ಕಿಮ್ಸ್‌ಗೆ ದಾಖ ಲಾಗಿದ್ದರು. ಅನಂತರ ಏರ್‌ ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಬೆಂಗಳೂರಿಗೆ ಕರೆದೊಯ್ದು, ಕೊಲಂಬಿಯಾ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅನಂತರ ಚೇತರಿಸಿದ ಶಿವಳ್ಳಿ ಅವರು 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತೀಚೆಗಷ್ಟೇ ಸಚಿವರಾಗಿ ನೇಮಕಗೊಂಡ ಅನಂತರ ಕುಂದಗೋಳ ಮತಕ್ಷೇತ್ರದ ಕುರಡಿಕೇರಿಯಲ್ಲಿ ಆಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಶಿವಳ್ಳಿ
ಧಾರವಾಡದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ಕುಸಿದು ಬಿದ್ದ ಬಳಿಕ ಸ್ಥಳದಲ್ಲೇ ಖುದ್ದಾಗಿ ಹಾಜರಿದ್ದು, ರಕ್ಷಣಾ ಕಾರ್ಯದ ಪರಿಶೀಲನೆ ಕೈಗೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಗುರುವಾರ ರಾತ್ರಿ 9 ಗಂಟೆಯವರೆಗೂ ಇದ್ದರು. 
ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಒಟ್ಟು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಎಸ್‌. ಶಿವಳ್ಳಿ ಅವರು ಕೆಲವೇ ತಿಂಗಳ ಹಿಂದೆಯಷ್ಟೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿ ನೇಮಕಗೊಂಡಿದ್ದರು. 

ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ
ಸಚಿವ ಸಿ.ಎಸ್‌. ಶಿವಳ್ಳಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕುಂದಗೋಳ ತಾಲೂಕು ಯರಗುಪ್ಪಿಯಲ್ಲಿ ಶನಿವಾರ ನಡೆಯಲಿದೆ. ಯರಗುಪ್ಪಿನಲ್ಲಿನ ಸಚಿವರ ಹೊಲದಲ್ಲಿಯೇ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಮಾ.22ರಿಂದ 24ರವರೆಗೆ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next