ಶ್ರೀರಂಗಪಟ್ಟಣ: ಕೊರೊನಾ ವಿಚಾರದಲ್ಲಿ ಶಾಸಕ ಮತ್ತು ಸಚಿವರ ನಡುವಿನ ಜಟಾಪಟಿ ಮುಂದುವರೆದಿದೆ. ಸೋಮವಾರ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಚಿವ ನಾರಾಯಣಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದು, “ಇವರು ನಾಲಾಯಕ್ ಸಚಿವರು” ಎಂದಿದ್ದಾರೆ.
ಭಾನುವಾರ ಶ್ರೀರಂಗಪಟ್ಟಣ ಕೋವಿಡ್ ಕೇರ್ ಗೆ ಭೇಟಿ ನೀಡಿದ್ದ ಸಚಿವ ನಾರಾಯಣಗೌಡ, ಕ್ಷೇತ್ರದ ಶಾಸಕನಿಂದ ನಾನು ಬುದ್ದಿ ಕಲಿಯಬೇಕಿಲ್ಲ. ನಮ್ಮ ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಇವರಿಗೆ ಹೇಳಿಸಿಕೊಂಡು ಕಲಿಯಬೇಕಿಲ್ಲ. ಅವನಿಗೆ ಅನುಭವವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಇಂದು ಪಟ್ಟಣದ ಮಂಜುನಾಥ ಸಮುದಾಯ ಭವನದ ಕೋವಿಡ್ ಕೇರ್ ಗೆ ಭೇಟಿ ನೀಡಿದ್ದ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಚಿವರು ಪುಕ್ಕಟೆ ಏನು ಅಂತ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ವ್ಯವಸ್ಥೆ ಅದ್ವಾನ ಆಗಿರುವುದಕ್ಕೆ ನೀವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ರವೀಂದ್ರ ಶ್ರೀಕಂಠಯ್ಯ, ಸಚಿವರು ಮಾನವೀಯತೆ ಕಲಿಯಬೇಕಿದೆ. ಇವರ ಮನೆಯಲ್ಲಿ ಇದೇ ರೀತಿ ಆಗಿದ್ದರೆ ನೀವು ಅಡ್ಜೆಸ್ಟ್ ಮಾಡಿಕೊಂಡು ಸುಮ್ಮನಿರುತ್ತಿದ್ದಿರಾ? ಅವನು ಯಾವ ಸೀಮೆ ಮಂತ್ರಿ, ಜಿಲ್ಲೆಯ ಮರ್ಯಾದೆ ತೆಗೆದಿದ್ದಿರಾ ಎಂದು ಕಿಡಿಕಾರಿದರು.
ಕೋವಿಡ್ ಲೆಕ್ಕದ ವಿಚಾರದಲ್ಲಿ ಸಭೆಯಲ್ಲಿ ಲೆಕ್ಕ ಕೇಳಿದರೂ ತಲೆ ತಗ್ಗಿಸಿಕೊಂಡು ಕುಳಿತಿದ್ದರು. ಜಿಲ್ಲೆಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಇನ್ನು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿಲ್ಲ ಎಂದು ಸಚಿವರು ಸೇರಿದಂತೆ ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವ ಯೋಗ್ಯತೆ ಜಿಲ್ಲೆಯ ಸಚಿವರಿಗಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.