ಬೆಂಗಳೂರು: ಜಪಾನ್‍ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಓಲಂಪಿಕ್ ನಲ್ಲಿ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಅವರು ಚಿನ್ನದ ಪದಕ ಗೆದ್ದರೆ ರಾಜ್ಯ ಸರ್ಕಾರದಿಂದ ರೂ. 5 ಕೋಟಿ , ಬೆಳ್ಳಿ ಗೆದ್ದರೆ ರೂ. 3 ಕೋಟಿ ಹಾಗೂ ಕಂಚಿನ ಪದಕ ಗೆದ್ದರೆ ರೂ. 2 ಕೋಟಿ ಬಹುಮಾನ ನೀಡಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.
ಈ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷ ನೀಡಲಾಗಿದೆ. ಪ್ಯಾರಾ ಪವರ್ ಲಿಪ್ಟಿಂಗ್‍ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇಬ್ಬರೂ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷದ ಚೆಕ್ ವಿತರಿಸಿದರು. ಇದೇ ವೇಳೆ ಶಿಖರದಿಂದ ಸಾಗರ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಾಹಸ ಯಾತ್ರೆಗೆ ಸಚಿವರು ಹಸಿರು ನಿಶಾನೆ ತೋರಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ದೈಹಿಕ ಶಿಕ್ಷಣಕ್ಕೆ ಸಮಯ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಪ್ರತಿಯೊಂದು ಶಾಲೆಗೂ ಕಡ್ಡಾಯವಾಗಿ ಮೈದಾನ ಇರಬೇಕು. ಒಂದು ವೇಳೆ ಮೈದಾನ ಇಲ್ಲದಿದ್ದಲ್ಲಿ ಬಾಡಿಗೆ ಆಧಾರದಲ್ಲಾದರೂ ಮೈದಾನ ಪಡೆದು, ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಬೇಕು. ವ್ಯಾಯಾಮ, ಕ್ರೀಡೆ ಮಕ್ಕಳಿಗೆ ಅತ್ಯವಶ್ಯಕ. ಈ ಬಗ್ಗೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಶಾಲೆಗಳು ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆಯನ್ನೇ ರದ್ದು ಮಾಡುವಂತೆಯೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿರುವುದಾಗಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ” ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕಕ್ಕೆ ಸೇರಿದ 5 ಯುವತಿಯರು ಕಾಶ್ಮೀರದಲ್ಲಿ kolhoi (5425 ಮೀ) ಶಿಖರವನ್ನು ಏರುವ ಮೂಲಕ ಶುರುವಾಗಿ, ತದನಂತರ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿ ಈ ಯಾನವನ್ನು ಮುಕ್ತಾಯಗೊಳಿಸಲಾಗುವುದು.
ಇದು ಸುಮಾರು 45 ದಿನಗಳ ಅಭಿಯಾನ ಆಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ನಾರಿಯ ಪುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ವಿಭಿನ್ನವಾದ ಒಂದು ಕಾರ್ಯಕ್ರಮವಾಗಿರುತ್ತದೆ. ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನಕ್ಕೆ ಸಚಿವರು ಚಾಲನೆ ನೀಡಿದರು. ಸರ್ಕಾರದಿಂದ ಸಾಹಸ ಕ್ರೀಡೆಗಳಿಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಯುವ ಜನತೆ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಸಚಿವ ಡಾ. ನಾರಾಯಣಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಓಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ, ಎಮ್‍ಎಲ್‍ಸಿ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ವೆಂಕಟೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.