Advertisement

ರೇಷ್ಮೆ ಉತ್ಪಾದನೆ ದ್ವಿಗುಣಗೊಳಿಸಿ, ಮಾರುಕಟ್ಟೆ ವಿಸ್ತರಿಸಿ: ಸಚಿವ ಡಾ. ನಾರಾಯಣ ಗೌಡ

05:02 PM Sep 28, 2021 | Team Udayavani |

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ (ಕೆ.ಎಸ್.ಐ.ಸಿ) ವಹಿವಾಟು ವಿಸ್ತರಣೆಗೆ ಕ್ರಮವಹಿಸಿ, ಉತ್ಪಾದನೆ ಕೂಡ ದ್ವಿಗುಣಗೊಳಿಸಲು ಸೂಕ್ತ ಕ್ರಮಕ್ಕೆ ಸಚಿವರ ಸೂಚನೆ. ಹಾಗೂ ಇರುವ ನೌಕರರನ್ನೇ ಬಳಸಿಕೊಂಡು, ಮಾರುಕಟ್ಟೆ ವಿಸ್ತರಣೆಗೆ ಕ್ರಮ ವಹಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

Advertisement

ವಿಕಾಸ ಸೌಧದಲ್ಲಿ ಇಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕ.ಎಸ್.ಐ.ಸಿ.ಯಲ್ಲಿ ಕಾರ್ಯವೈಖರಿಗೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆಯೇ ಕೆ.ಎಸ್.ಎಮ್.ಬಿ.ನಿಂದ ಕಚ್ಚಾ ರೇಷ್ಮೆ ಖರೀದಿಸಬೇಕು ಎಂದು ಕೆ.ಎಸ್.ಐ.ಸಿ.ಗೆ ಸೂಚನೆ ನೀಡಲಾಗಿತ್ತು. ಆದರೆ ಸಲ್ಲದ ನೆಪವೊಡ್ಡಿ ಕೆ.ಎಸ್.ಎಂ.ಬಿ. ನಿಂದ ಖರೀದಿಸದೆ ಖಾಸಗಿಯವರಿಂದ ಖರಿದಿಸುತ್ತಿದ್ದಾರೆ. ಇನ್ನು ಮುಂದೆ ಅಗತ್ಯವಿರುವ ಕಚ್ಚಾ ರೇಷ್ಮೆಯನ್ನು ಕೆ.ಎಸ್.ಎಂ.ಬಿ. ನಿಂದಲೇ ಖರೀದಿಸಬೇಕು ಎಂದು ಸಚಿವರು ಖಡಕ್ಕಾಗಿ ಹೇಳಿದರು.

ಖಾಸಗಿಯವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕ.ಎಸ್.ಐ.ಸಿ. ಮಾರ್ಕೆಟಿಂಗ್ ಮಾಡುವ ಕೆಲಸ ಆಗುತ್ತಿಲ್ಲ. ಮಾರುಕಟ್ಟೆ ನಿರ್ವಹಣೆಗೆ ಜವಾಬ್ದಾರಿ ವಹಿಸಿ ಒಬ್ಬರನ್ನು ನೇಮಿಸಬೇಕು. ಮಾರುಕಟ್ಟೆ ವಿಸ್ತರಣೆ ಆಗಬೇಕು. ಲಕ್ಷಾಂತರ ರೂಪಾಯಿ ಬೆಲೆಬಾಳುವ ರೇಷ್ಮೆ ಸೀರೆಯನ್ನು ಖರೀದಿಸಿದವರಿಗೆ, ಅತ್ಯುತ್ತಮವಾದ ಬ್ಯಾಗ್ ಅಥವಾ ಸೂಟ್‍ಕೇಸ್‍ನಲ್ಲಿ ಸೀರೆಯನ್ನು ಹಾಕಿ ಕೊಡಬೇಕು. ಗುಣಮಟ್ಟದ ಮತ್ತು ಆಕರ್ಷಕ ರೀತಿಯ ಮಾರ್ಕೆಟಿಂಗ್ ಅತಿ ಮುಖ್ಯ ಎಂದು ಹೇಳಿದರು.

ಮಾರ್ಕೆಟಿಂಗ್ ಜೊತೆಗೆ ಹೊಸ ಹೊಸ ಡಿಸೈನ್‍ ಕೂಡ ಬರಬೇಕು. ಅದಕ್ಕಾಗಿ ಓರ್ವ ಡಿಸೈನರ್‍ ಅನ್ನು ನೇಮಿಸಿ ಅಥವಾ ಇಲಾಖೆಯಲ್ಲಿ ಇರುವವರಿಗೆ ಜವಾಬ್ದಾರಿ ನೀಡಬೇಕು. ಮೈಸೂರು ಸಿಲ್ಕ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿದೆ. ಎರಡು ಪಾಳಿಯಲ್ಲಿ ಕೆಲಸ ಮಾಡುವ ಮೂಲಕ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಯುನಿಯನ್‍ ಲೀಡರ್‍ಗಳ ಜೊತೆ ಸಭೆ ಕರೆದು ಚರ್ಚೆ ನಡೆಸಬೇಕು. ರೇಷ್ಮೆ ಸೀರೆ ಎಲ್ಲ ವರ್ಗದವರಿಗೆ ಸಿಗುವ ಹಾಗೆ ವಿವಿಧ ಗುಣಮಟ್ಟದಲ್ಲಿ ಸಿದ್ದಪಡಿಸಬೇಕು ಎಂದು ಹೇಳಿದರು.

ರೇಷ್ಮೆ ನೂಲು ತೆಗೆಯುವ ಯಂತ್ರ ಹಾಸನ, ಬೆಳಗಾವಿ, ಗುಲ್ಬರ್ಗ, ಕೂಡ್ಲಗಿಯಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿ ಬಿದ್ದಿದೆ. ಅದನ್ನು ಸರಿಪಡಿಸಿ, ಮೈಸೂರು, ಕನಕಪುರ, ಚನ್ನಪಟ್ಟಣ ಹಾಗೂ ಟಿ.ನರಸಿಪುರದಲ್ಲಿರುವ ಕೆ.ಎಸ್.ಐ.ಸಿ.ಯ ಘಟಕಗಳಿಗೆ ತರಬೇಕು. ದುರಸ್ತಿ ಮಾಡಿ ಆ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಬೇಕು. ಅನುಪಯುಕ್ತ ರೇಷ್ಮೆ (ಸ್ಕ್ರಾಪ್‍) ಯನ್ನು ಸರಿಯಾದ ರೀತಿಯಲ್ಲಿ ಹರಾಜು ಮಾಡದಿರುವುದು ಗಮನಕ್ಕೆ ಬಂದಿದೆ. ಇ ಟೆಂಡರ್ ಮೂಲಕವೇ ಹರಾಜು ಹಾಕಬೇಕು ಎಂದು ಹೇಳಿದರು.

Advertisement

ಏರ್ ಪೋರ್ಟ್‍ನಲ್ಲಿ ಮಳಿಗೆ: ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ರೇಷ್ಮೆ ಉತ್ಪಾದನಾ ಮಾರಾಟ ಮಳಿಗೆ ಶೀಘ್ರವೇ ತೆರೆಯಬೇಕು. ಅದಕ್ಕಾಗಿ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಬೇಕು. ಮುಂಬೈನಲ್ಲಿ ಅತಿ ಹೆಚ್ಚು ಕನ್ನಡಿಗರು ಇರುವ ದಾದರ್ ಹಾಗೂ ಮಾಟುಂಗಾ ಪ್ರದೇಶದಲ್ಲಿ ಮಳಿಗೆ ಆರಂಭಿಸುವ ಬಗ್ಗೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹುಬ್ಬಳ್ಳಿಯಲ್ಲಿ ರೇಷ್ಮೆ ಟೆಸ್ಟಿಂಗ್ ಲ್ಯಾಬ್, ಗುಲ್ಬರ್ಗದಲ್ಲಿ ಪರ್ಚೇಸಿಂಗ್ ಸೆಂಟರ್ ‍ಸ್ಥಾಪಿಸುವ ಸಂಬಂಧ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next