Advertisement

ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದ ಮೊರೆ, ನಮಗೆ ಯಾವುದೇ ಭಯವಿಲ್ಲ: ಸಚಿವ ನಾರಾಯಣಗೌಡ

03:44 PM Mar 06, 2021 | Team Udayavani |

ಮಂಡ್ಯ: ನಾವು ಯಾವುದೇ ಭಯಕ್ಕೆ ನ್ಯಾಯಾಲಯಕ್ಕೆ ಹೋಗಿಲ್ಲ. ಸತ್ಯಾಂಶ ಇದ್ದರೆ ಬಿಡುಗಡೆ ಮಾಡಲಿ. ಆದರೆ ಗ್ರಾಫಿಕ್ಸ್   ಕ್ರಿಯೆಟ್ ಮಾಡಿ ಗೌರವಕ್ಕೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಘಟನೆಗಳಲ್ಲಿ ಸತ್ಯ ಇದ್ದರೆ ತೋರಿಸಲಿ. ಅದಕ್ಕೆ ನಾವು ತಲೆ ಬಾಗುತ್ತೇವೆ. ಜನಸಾಮಾನ್ಯರು ನಮ್ಮನ್ನು ನೋಡುತ್ತಿದ್ದಾರೆ. ನಮ್ಮ ಗೌರವದ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗಿದ್ದೇವೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿದೆ. ರಮೇಶ್‌ ಜಾರಕಿಹೊಳಿ ಅವರ ವಿಡಿಯೋ ಗ್ರಾಫಿಕ್ಸ್ ಮಾಡಿರಬಹುದು ಎಂದು ಸಮರ್ಥಿಸಿಕೊಂಡರು.

ರಾಜಕೀಯ ಷಡ್ಯಂತ್ರ: ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ಹೋಗಿದ್ದ ಎಲ್ಲರನ್ನು ರಾಜಕೀಯವಾಗಿ ಷಡ್ಯಂತ್ರ ಮಾಡಲಾಗುತ್ತಿದೆ. ವೈಯಕ್ತಿಕವಾಗಿ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ವಿಚಾರಗಳನ್ನಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ರಾಜ್ಯ ಸರ್ಕಾರ ಕ್ರಮ: ರಮೇಶ್‌ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ತನಿಖೆ ಹಂತದಲ್ಲಿದೆ. ಸಿಡಿಯು ಅಸಲಿಯೋ, ನಕಲಿಯೋ ಎಂಬುದು ಮುಂದೆ ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಗ ಬಿಡುಗಡೆ ಮಾಡಲಿ: ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇನ್ನೂ ಮೂರ‍್ನಾಲ್ಕು ಮಂದಿ ನಾಯಕರ ಸಿಡಿ ಇದೆ ಎಂದು ಹೇಳುತ್ತಿದ್ದಾನೆ. ಆತ ಬೇಗ ಬಿಡುಗಡೆ ಮಾಡಲಿ. ಆತನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆತ ದೊಡ್ಡ ಮನುಷ್ಯನಾಗಲಿ ಬಿಡು ಎಂದು ವ್ಯಂಗ್ಯವಾಡಿದರು.

Advertisement

ರಮೇಶ್‌ ಜಾರಕಿಹೊಳಿ ಜತೆ ಮಾತನಾಡಿಲ್ಲ: ಘಟನೆಯ ನಂತರ ನಾನು ರಮೇಶ್‌ಜಾರಕಿಹೊಳಿ ಜತೆ ಮಾತನಾಡಿಲ್ಲ. ಅವರು ನಮ್ಮ ಸರ್ಕಾರದಲ್ಲಿ ಸಚಿವರಾಗಿದ್ದವರು. ಇವರ ವಿಚಾರದಲ್ಲೂ ರಾಜಕೀಯ ನಡೆದಿದೆ. ಒಂದಲ್ಲ ಒಂದು ದಿನ ಹೊರ ಬರಲಿದೆ. ನಾವು ಯಾವ ಸಚಿವರು ಯಾವುದೇ ಹೋಟೆಲ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬಾಂಬೆ ಕಳ್ಳ ಎನ್ನುವುದನ್ನು ಬಿಡಬೇಕು: ನಾನು ಬಾಂಬೆಯಲ್ಲಿ ಸ್ವಚ್ಛ ಚಾರಿತ್ರ್ಯದಿಂದ ಬದುಕಿದ್ದೇನೆ. ನಾನೇನು ಕಳ್ಳತನ, ಲೂಟಿ, ಚೆಕ್‌ಬೌನ್ಸ್ ಮಾಡಿಲ್ಲ. ಆದರೂ ನನ್ನ ಬಾಂಬೆ ಕಳ್ಳ ಅಂತ ಕರೆಯುತ್ತಿದ್ದಾರೆ. ಯಾಕೆ ಕರೆಯುತ್ತಾರೆ. ನಾನು ಶೀಘ್ರದಲ್ಲಿಯೇ ರಾಜಕಾರಣವನ್ನೇ ತ್ಯಾಗ ಮಾಡುತ್ತೇನೆ. ಈ ರೀತಿ ಮಾತನಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next