Advertisement

2 ವರ್ಷ; 92,919 ಉದ್ಯೋಗ ಸೃಷ್ಟಿ; ಕೋವಿಡ್ ವೇಳೆ 1,428 ಉದ್ದಿಮೆ ಆರಂಭ

01:51 AM Mar 30, 2022 | Team Udayavani |

 

Advertisement

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿಯೂ ರಾಜ್ಯದಲ್ಲಿ 1,428 ಸಣ್ಣ ಕೈಗಾರಿಕೆಗಳು ಆರಂಭವಾಗಿದ್ದು, 92,919 ಉದ್ಯೋಗ ಸೃಷ್ಟಿ ಮಾಡಿದ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ.

ಕೊರೊನಾ ಲಾಕ್‌ಡೌನ್‌ ಮತ್ತು ನಿರ್ಬಂಧಗಳ ನಡುವೆಯೂ ಉತ್ತಮವಾಗಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದು ಮಂಗಳವಾರ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಸದಸ್ಯ ಯು.ಬಿ. ವೆಂಕಟೇಶ್‌ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್‌ ಉತ್ತರಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಸ್ವ-ಉದ್ಯೋಗ ಸೃಜನ ಯೋಜನೆ ಜಾರಿಗೊಳಿಸಿದೆ. ರಾಜ್ಯದ ಜಿಡಿಪಿಗೆ ಕೈಗಾರಿಕಾ ವಲಯದ ಕೊಡುಗೆ ಈ ಹಿಂದೆ ಶೇ. 21.3ರಷ್ಟಿತ್ತು. 2020-21ರಲ್ಲಿ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ಅದು ಶೇ. 19.4ಕ್ಕೆ ಇಳಿಕೆಯಾಗಿತ್ತು. ಈಗ ಕೈಗಾರಿಕಾ ಚಟುವಟಿಕೆ ಮತ್ತೆ ಚುರುಕುಗೊಂಡಿದ್ದು, ಗ್ರಾಮೀಣ ಪ್ರದೇಶಗಳಿಂದ ಜನ ಉದ್ಯೋಗಗಳಿಗೆ ವಾಪಸಾಗುತ್ತಿದ್ದಾರೆ ಎಂದರು.

ಹೆಚ್ಚು ಹೊಡೆತ
ಕೊರೊನಾ ಅವಧಿಯಲ್ಲಿ ಮೋಟಾರು ಉದ್ದಿಮೆಗಳಿಗೆ ಹೆಚ್ಚು ಹೊಡೆತ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಕೈಗಾರಿಕೆಗಳು ಬಂದ ಮೇಲೆ ಸಣ್ಣ ಕೈಗಾರಿಕೆಗಳಿಗೆ ಭಾರೀ ಪೆಟ್ಟು ಬೀಳುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದ್ದಾರೆ. ಕೊರೊನಾದ 2 ವರ್ಷಗಳಲ್ಲಿ 754 ಸಣ್ಣ ಕೈಗಾರಿಕೆಗಳಿಗೆ ಬೀಗ ಬಿದ್ದಿದ್ದು, 46 ಸಾವಿರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬೇಡಿಕೆ – ಕಚ್ಚಾವಸ್ತುಗಳ ಕೊರತೆ, ಹಳೆ ತಂತ್ರಜ್ಞಾನ, ಸರಕಾರದ ನೀತಿ, ಅನಗತ್ಯ ಬಂಡವಾಳ ಹೂಡಿಕೆ, ಆಡಳಿತ ಮಂಡಳಿಯ ಆಂತರಿಕ ಸಮಸ್ಯೆ ಮತ್ತಿತರ ಕಾರಣಗಳಿಂದ 2020ರಲ್ಲಿ 562 ಮತ್ತು 2021ರಲ್ಲಿ 192 ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಕ್ರಮವಾಗಿ 14,769 ಮತ್ತು 31,816 ಜನ ಉದ್ಯೋಗ ಕಳೆದುಕೊಂಡಿದ್ದಾರೆ.

Advertisement

ಬಾಗಿಲು ಮುಚ್ಚಿರುವ ಸಣ್ಣ ಕೈಗಾರಿಕೆಗಳ ಬಲವರ್ಧನೆಗೆ ಸರಕಾರದಿಂದ ನಿರ್ದಿಷ್ಟ ಯೋಜನೆಗಳಿಲ್ಲ. ಆದರೆ ಸಂಸ್ಥೆಗಳು ಮುಚ್ಚಲ್ಪಟ್ಟ ಸಂದರ್ಭದಲ್ಲಿ ಕಾರ್ಮಿಕರು ಶಾಸನಾತ್ಮಕ ಸೌಲಭ್ಯಗಳನ್ನು ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next