ಮುದ್ದೇಬಿಹಾಳ: ರಾಜ್ಯ ಸರ್ಕಾರದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಾವೇ ಔರಂಗಜೇಬ ನಂತಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದ್ದಾರೆ.
ಡಿ. 26ರ ಮಂಗಳವಾರ ಮುದ್ದೇಬಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಟಿಪ್ಪು ಸುಲ್ತಾನನಿಗೆ ಹೋಲಿಸುವ ಪಾಟೀಲರೇ ಔರಂಗಜೇಬ ನಂತಿದ್ದಾರೆ ಎಂದು ಕುಟುಕಿದರು.
ಕರ್ನಾಟಕ ಬಿಜೆಪಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟು ಬಿಟ್ಟಿದ್ದಾರೆ. ಯಡಿಯೂರಪ್ಪ ಮತ್ತು ಕುಟುಂಬಕ್ಕೆ ಬೆಂಗಳೂರಿನ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಪಕ್ಷವನ್ನು ಮಾಡಿಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ರೈತರ ಕುರಿತು ಸಚಿವ ಶಿವಾನಂದ ಪಾಟೀಲರ ಆಕ್ಷೇಪಾರ್ಹವಾಗಿ ಮಾತನಾಡಿರುವುದನ್ನು ಮತ್ತೇ ಟೀಕಿಸಿದ ಅವರು, ಶಿವಾನಂದ ಪಾಟೀಲರು ರಾಜ್ಯದ ರೈತರ ಕ್ಷಮೆ ಕೇಳಬೇಕು. 5 ಲಕ್ಷದ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮ ರೈತರು ಇಳಿದಿಲ್ಲ. ಶಿವಾನಂದ ಪಾಟೀಲರಿಗೇ ನಾನು 5 ಕೋಟಿ ಕೊಡುತ್ತೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಮೊದಲೇ ಸವಾಲು ಹಾಕಿದ್ದೇನೆ. ಶಿವಾನಂದರು ರಾಜೀನಾಮೆ ಕೇಳಿದರೆ ಕೊಡುವಂಥ ಗಿರಾಕಿ ಅಲ್ಲ. ಇಂಥ ಮಂತ್ರಿಗಳನ್ನಿಟ್ಟುಕೊಂಡು ನೀವು ಹೇಗೆ ಸರ್ಕಾರ ನಡೆಸ್ತೀರಿ ಎನ್ನುವುದನ್ನು ಸೋನಿಯಾ ಗಾಂಧಿ, ರಾಜೀವ ಗಾಂಧಿ ಹೇಳಬೇಕು ಎಂದರು.
ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕರು ಸಮರ್ಪಕವಾಗಿ ಕೆಲಸ ಮಾಡಲಿಲ್ಲವಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಜೋಡೆತ್ತುಗಳದ್ದು (ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ) ಮತ್ತು ಆ ಜೋಡೆತ್ತುಗಳದ್ದು (ಸಿಎಂ ಸಿದದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ) ಅಡ್ಜಸ್ಟ್ ಮೆಂಟ್ ರಾಜಕೀಯ. ನಮ್ಮದು ತೆಗೆದರೆ ನಿಮ್ಮದು ತೆಗೆಯುತ್ತೇವೆ ಎಂದು ಬೆದರಿಸಿ ಇವರು ಅವರನ್ನು ಸುಮ್ಮನಾಗಿಸಿದ್ದಾರೆ ಎಂದು ಹೇಳಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ 3 ದಿನ ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆದಿದ್ದು, 69 ಶಾಸಕರು ಉ.ಕ. ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿ ಎರಡೂವರೆ ತಾಸು ಉತ್ತರ ಕೊಟ್ಟಿದ್ದಾರೆ. ಉಕ ಸಮಸ್ಯೆ ಬಗ್ಗೆ ಹಿಂದಿನ 11 ಅಧಿವೇಶನಗಳಲ್ಲಿ ಆಗದಷ್ಟು ಚರ್ಚೆ ಬೆಳಗಾವಿ ಅಧಿವೇಶನದಲ್ಲಾಗಿದೆ. ಸದ್ಯ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಮತ್ತೊಮ್ಮೆ ಉಕ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತೇವೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮತ್ತಿತರರು ಇದ್ದರು.