ಬನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ತವರು ಕ್ಷೇತ್ರದಲ್ಲೇ ರಸ್ತೆ ಡಾಂಬರೀಕರಣದಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಳಪೆ ಕಾಮಗಾರಿಯ ಡಾಂಬರೀಕರಣದ ರಸ್ತೆಯನ್ನು ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಸಮೀಪದ ದೊಡ್ಡಮುಲಗೂಡು ಗ್ರಾಮದಲ್ಲಿ ಸಿರಾ ನಂಜನಗೂಡು ಎಸ್‌ಎಚ್84 ನಿಂದ ಗಾಮನಹಳ್ಳಿ, ದೊಡ್ಡಮುಲಗೂಡು ಮತ್ತು ಚಿಕ್ಕಮುಲಗೂಡಿನ ಚೈನೇಜ್ 0.002-4.5 ಕಿ.ಮೀನ ಡಾಂಬರೀಕರಣದ ರಸ್ತೆಯೇ ತೀರ ಕಳಪೆ ಕಾಮಗಾರಿಯಿಂದ ಕೂಡಿದ್ದು, ಡಾಂಬರೀಕರಣ ಮಾಡಿದ ನಾಲ್ಕೈದು ದಿನಗಳಲ್ಲೇ ಡಾಂಬರು ಎದ್ದು, ಅಲ್ಲಲ್ಲಿ ಹಳ್ಳಕೊಳ್ಳಗಳು ನಿರ್ಮಾಣವಾಗುತ್ತಿದೆ.
ಸುಮಾರು 1.80 ಕೋಟಿ ನಿರ್ಮಾಣದ ಕಾಮಗಾರಿಯು ತೀರಾ ಕಳಪೆಯಾಗಿದೆ ಎನ್ನುವ ಸಾರ್ವಜನಿಕರು ಡಾಂಬರೀಕರಣಕ್ಕಾಗಿ ಸರ್ಕಾರದಿಂದ ಕೋಟ್ಯಂತರ ರೂ ಹಣ ಪಡೆದಿರುವ ಗುತ್ತಿಗೆದಾರರು, ತೀರ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಸಿರುವುದು. ಈ ರಸ್ತೆಗಳಲ್ಲಿ ವಾಹನ ಸಂಚಾರ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸುವ ಗ್ರಾಮಸ್ಥರು ಇದರ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.
ದೊಡ್ಡಮುಲಗೂಡಿನ ಮಾಜಿ ಗ್ರಾಪಂ ಅಧ್ಯಕ್ಷ ಹಾಲಿ ಸದಸ್ಯ ಡಿ. ಆರ್.ಲೋಕೇಶ್ ಮಾತನಾಡಿ, ಗ್ರಾಮದ ಅಭಿವೃದ್ಧಿಯ ಉದ್ದೇಶದಿಂದ ರಸ್ತೆ ಡಾಂಬರೀಕರಣ ಮಾಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರ ಪರಿಣಾಮ ಸಿರಾ ನಂಜನಗೂಡು ಎಸ್‌ಎಚ್84 ನಿಂದ ಗಾಮನಹಳ್ಳಿ, ದೊಡ್ಡಮುಲಗೂಡು ಮತ್ತು ಚಿಕ್ಕಮುಲಗೂಡಿನ ಚೈನೇಜ್ ರಸ್ತೆಯ ಡಾಂಬರೀಕರಣದ ಕಾಮಗಾರಿ ಆರಂಭಿಸಲಾಯಿತು.
ಇದಕ್ಕಾಗಿ ಸರಕಾರದಿಂದ ಸುಮಾರು 1 ಕೋಟಿ 80 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಯಿತು. ಆದರೆ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪರಿಣಾಮ ಈ ರಸ್ತೆಯ ಉದ್ದಗಲ ಅಲ್ಲಲ್ಲಿ ಡಾಂಬರು ಎದ್ದು ಹಳ್ಳಕೊಳ್ಳಗಳು ನಿರ್ಮಾಣವಾಗುತ್ತಿದೆ. ಜೊತೆಗೆ ರಸ್ತೆಯ ಮೇಲ್ ಮಟ್ಟಕ್ಕೆ ಎಂಬಂತೆ ಡಾಂಬರನ್ನು ಬಳಿದು ವಾಹನಗಳು ಓಡಾಡುವ ಮುನ್ನವೇ ರಸ್ತೆ ಪುನಃ ಹಳೆಯ ಸ್ಥಿತಿಗೆ ಹೋಗುತ್ತಿರುವುದು ಕಾಮಗಾರಿ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವುದನ್ನು ಎತ್ತಿಹಿಡಿಯುತ್ತದೆ ಎಂದು ಆರೋಪಿಸಿದರು.
ಕಾಮಗಾರಿಯ ವೇಳೆ ಹಾಜರಾಗುತ್ತಿದ್ದ ಸಹಾಯಕ ಎಂಜಿನಿಯರ್ ಸತೀಶ್‌ಚಂದ್ರರಿಗೆ ರಸ್ತೆಯ ಅವ್ಯವಸ್ಥೆಯ ಬಗ್ಗೆ ದೂರು ನೀಡಿದರೆ, ಹಾಳಾಗಿರುವ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಆದರೆ ರಸ್ತೆಯ ಕಳಪೆ ಕಾಮಗಾರಿ ಮಾಡಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡುತ್ತಿಲ್ಲ ಎಂದು ತಿಳಿಸಿದರು.
ಲೋಕೋಪಯೋಗಿ ಸಚಿವರ ತವರು ಕ್ಷೇತ್ರದಲ್ಲೇ ಅಧಿಕಾರಿಗಳು ಈ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಯಾವ ಅನುಕೂಲವಾಗುತ್ತದೆ ಎಂದು ಪ್ರಶ್ನಿಸಿದ ಅವರು ಹಾಳಾಗಿರುವ ರಸ್ತೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ, ಮೇಲಧಿಕಾರಿಗಳಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.