Advertisement
ದೇಗುಲ ವ್ಯಾಪ್ತಿ, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧ ಹೇರುತ್ತಿರುವ ವಿಚಾರ ಸದನದಲ್ಲಿ ಬುಧವಾರ ಪ್ರಸ್ತಾವವಾಗಿ, ಕೆಲಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ವಾಕ್ಸಮರಕ್ಕೂ ಕಾರಣವಾಯಿತು. ಸರಕಾರದ ಪರವಾಗಿ ಉತ್ತರ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, 2002ರ ಧಾರ್ಮಿಕ ದತ್ತಿ ಧರ್ಮಾದಾಯ ನಿಯಮಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿದೆ. 2002ರಲ್ಲಿ ನಮ್ಮ ಸರಕಾರ ಇರಲಿಲ್ಲ. ಆಗಿನ ಸರಕಾರವೇ ನಿಯಮ ಮಾಡಿದೆ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ನಿರ್ಬಂಧ ಹೇರಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು. ದೇಗುಲಗಳ ವ್ಯಾಪ್ತಿಯಲ್ಲಿ ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನಸಭೆ ಉಪ ನಾಯಕ ಯು.ಟಿ. ಖಾದರ್, ಶ್ರಮಿಕ ವರ್ಗ ಇಂದು ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು ಕುಟುಂಬ ಪಾಲನೆ ಮಾಡುತ್ತಿದೆ. ಇವರಿಗೆ ಜಾತಿ-ಧರ್ಮ ಸೋಂಕು ತಾಕಿಸುವುದು ಸರಿಯಲ್ಲ. ಅವರು ಕಳವು, ದರೋಡೆ ಮಾಡುತ್ತಿಲ್ಲ, ಕಷ್ಟಪಟ್ಟು ದುಡಿಯುತ್ತಿದ್ದಾರೆ. ಇದೀಗ ಅವರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದರೆ ಇದು ಸಾಮರಸ್ಯ ಹಾಳಾಗಲು ಕಾರಣವಾಗುತ್ತದೆ ಎಂದರು. ನಾವು ಎಲ್ಲಿಗೆ ತಲುಪುತ್ತಿದ್ದೇವೆ?
ಮಾಜಿ ಸಚಿವ ಜಮೀರ್ ಅಹಮದ್ ಮಾತನಾಡಿ, ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಒಂದೆಡೆ ಹೇಳುತ್ತಾರೆ. ಮತ್ತೂಂದೆಡೆ ಮುತಾಲಿಕ್, ಮುಸ್ಲಿಂ ಸಮುದಾಯದವರು ಆರ್ಥಿಕವಾಗಿ ಶಕ್ತರಾಗದಂತೆ ನೋಡಿಕೊಳ್ಳಿ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಇದನ್ನೆಲ್ಲ ನೋಡಿಕೊಂಡು ಸರಕಾರ ಸುಮ್ಮನೆ ಕೂತಿದೆ. ನಾವು ಎಲ್ಲಿಗೆ ತಲುಪುತ್ತಿದ್ದೇವೆ, ಸಮಾಜ ಎಲ್ಲಿ ಹೋಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಮತಬ್ಯಾಂಕ್‌ಗಾಗಿ ನೀವು ಈ ರೀತಿ ಮಾತನಾಡುತ್ತಿದ್ದೀರಿ ಎಂದು ಬಿಜೆಪಿ ಶಾಸಕರು ದೂರಿದರು.
Related Articles
ಕಾಂಗ್ರೆಸ್‌ನ ಅರ್ಷದ್ ರಿಜ್ವಾನ್ ಮಾತನಾಡಿ, ಮಾರಿಕಾಂಬ ದೇವಸ್ಥಾನ, ಬಪ್ಪನಾಡು ದೇವಸ್ಥಾನ ಕಟ್ಟಿದವರು ಮುಸ್ಲಿಂ ಸಮುದಾಯದವರು. ಮಾರಿಕಾಂಬ ಗುಡಿ ಕಟ್ಟಿದ್ದು ಒಬ್ಬ ಮುಸ್ಲಿಂ ಸೈನಿಕ. ಕೆಳದಿಯ ಬಸವಪ್ಪ ನಾಯಕನ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ. ಆ ದೇವಿ ಮುಸ್ಲಿಂ ಸೈನಿಕನಿಗೆ ದೇವಸ್ಥಾನ ನಿರ್ಮಾಣ ಮಾಡಲು ಹೇಳಲಾಯಿತು ಎಂಬ ಪ್ರತೀತಿ ಇದೆ. ಸಮಾಜ ಒಡೆಯೋ ಕೆಲಸ ಯಾರೂ ಮಾಡಬೇಡಿ. ಸರಕಾರ ಈ ವಿಷಯದಲ್ಲಿ ಸುಮ್ಮನಿರುವುದು ಸರಿಯಲ್ಲ ಎಂದು ಹೇಳಿದರು.
Advertisement
ಇದನ್ನೂ ಓದಿ:ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ
ಹೇಡಿಗಳು ಪದ ಬಳಕೆ-ಆಕ್ರೋಶಯು.ಟಿ. ಖಾದರ್ ಮಾತನಾಡುವಾಗ, ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂದು ಬರೆಯಲಾಗಿರುವ ಬ್ಯಾನ್‌ರ್‌ನಲ್ಲಿ ಹೆಸರು ಹಾಕಿಲ್ಲ, ಹೇಡಿಗಳು ಎಂದು ಟೀಕಿಸಿದರು. ಇದಕ್ಕೆ ಬಿಜೆಪಿಯ ರಘುಪತಿ ಭಟ್, ಹರೀಶ್ ಪೂಂಜಾ, ಸೋಮಶೇಖರ ರೆಡ್ಡಿ, ಸತೀಶ್ ರೆಡ್ಡಿ, ರೇಣುಕಾಚಾರ್ಯ ಸೇರಿ ಕರಾವಳಿ ಭಾಗದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಖಾದರ್, ನಾನು ಯಾರ ಹೆಸರೂ ಹೇಳಲಿಲ್ಲ, ಹೇಡಿಗಳು ಎಂದಾಕ್ಷಣ ನಿಮಗೆ ಕೋಪ ಏಕೆ? ನೀವು ಹೇಡಿಗಳಾ?’ ಎಂದು ಕೆಣಕಿದರು. ಇದರಿಂದ ಬಿಜೆಪಿ ಶಾಸಕರು ಮತ್ತಷ್ಟು ಕುಪಿತರಾಗಿ ಖಾದರ್ ಮೇಲೆ ಮುಗಿಬಿದ್ದರು. ಸ್ಥಳೀಯವಾಗಿ ಇರುವ ನಿಯಮ ಪಾಲಿಸಲಾಗುತ್ತಿದೆ, ಅದರಿಂದ ನಿಮಗೇನು ಕಷ್ಟ, ನೀವು ಮತಬ್ಯಾಂಕ್‌ಗಾಗಿ ಇಂತಹದ್ದೆಲ್ಲ ಪ್ರಸ್ತಾಪಿಸುತ್ತಿದ್ದೀರಿ ಎಂದು ದೂರಿದರು. ಕಾಂಗ್ರೆಸ್‌ನ ಜಮೀರ್ ಅಹಮದ್, ಪ್ರಿಯಾಂಕ್ ಖರ್ಗೆ, ಅಜಯ್‌ಸಿಂಗ್ ಮತ್ತಿತರರು ಯು.ಟಿ. ಖಾದರ್ ಅವರಿಗೆ ಮಾತನಾಡಲು ಬಿಡಿ ಎಂದು ಸ್ಪೀಕರ್ ಮೇಲೆ ಒತ್ತಡ ಹಾಕಿದರು. ಸಚಿವ ಮಾಧುಸ್ವಾಮಿಯವರೇ ಬಿಜೆಪಿ ಶಾಸಕರ ಆಸನಗಳತ್ತ ಹೋಗಿ ಸಮಾಧಾನ ಮಾಡಿ ಕೂರಿಸಬೇಕಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಹಿಂದೆ ಯಾರೇ ಮಾಡಿದ್ದರೂ ತಪ್ಪೇ. ಆದರೆ, ವ್ಯಾಪಾರಕ್ಕೆ ನಿರಾಕರಣ ಮಾಡುವುದು ಸರಿಯಲ್ಲ. ಇದರಿಂದ ಯಾವ ಸಂದೇಶ ರವಾನೆಯಾಗುತ್ತದೆ. ಸರಕಾರ ಗಂಭೀರವಾಗಿ ಪರಿಗಣಿಸಬೇಕು
– ಸಿದ್ದರಾಮಯ್ಯ, ವಿಪಕ್ಷ ನಾಯಕ