ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಉದ್ದೇಶದಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟು ಪ್ರವೇಶಾವಕಾಶ ಹೆಚ್ಚಿಸಲಾಗುತ್ತಿದೆ. ಇದರಿಂದ ಈವರೆಗೆ ವಿದ್ಯಾರ್ಥಿ ನಿಲಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೀಗ ಅನುಕೂಲವಾಗಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇತಿಹಾಸದಲ್ಲೇ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಸುಮಾರು 250 ಹೊಸ ವಿದ್ಯಾರ್ಥಿ ನಿಲಯಗಳನ್ನು ತೆರೆಯುವ ಆರ್ಥಿಕ ಹೊರೆಯನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಅಂದು ಧೋನಿ ಅವಕಾಶ ನೀಡಿದ್ದರೇ…ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದೆ:ನಿವೃತ್ತಿ ಘೋಷಿಸಿದ ವೇಗಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಶೇ.25ರಷ್ಟು ಪ್ರವೇಶಾವಕಾಶ ಹೆಚ್ಚಿಸುವ ಹಾಗೂ ಇದರಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ವಿದ್ಯಾಸಿರಿ ಯೋಜನೆಗೆ ಒದಗಿಸುವ ಅನುದಾನದಿಂದ ಬಳಸಿಕೊಳ್ಳುವ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಈ ಪ್ರಸ್ತಾವನೆಯ ಅನುಷ್ಠಾನಕ್ಕೆ 54.20 ಕೋಟಿ ರೂ. ಅನುದಾನ ಬೇಕಾಗಿದ್ದು, ತುರ್ತಾಗಿ 7.50 ಕೋಟಿ ರೂ ಅನುದಾನ ಒದಗಿಸುವಂತೆ ಹಾಗೂ ಸಂಖ್ಯಾಬಲ ಹೆಚ್ಚಳದ ಜೊತೆಯಲ್ಲಿಯೇ ಅಗತ್ಯವಿರುವ 190 ಅಡುಗೆಯವರು, 328 ಅಡುಗೆ ಸಹಾಯಕರು ಸೇರಿ ಒಟ್ಟು 518 ಹುದ್ದೆಗಳನ್ನು ಸೃಜಿಸಲು ಕೋರಲಾಗಿತ್ತು. ಇದೀಗ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಸಹಮತಿ ನೀಡಿರುವುದರಿಂದ ಅನುಷ್ಠಾನ ಕಾರ್ಯ ಶೀಘ್ರವೇ ಅಗಲಿದೆ ಎಂದು ಅವರು ವಿವರಿಸಿದ ಅವರು, ಈ ಪ್ರಸ್ತಾವನೆಯನ್ನು ಅನುಮೋದಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.