ಚಿಕ್ಕಬಳ್ಳಾಪುರ: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಇಡೀ ದೇಶದ ಜನರನ್ನು ಒಗ್ಗೂಡಿಸುವ ಕೆಲಸ. ಇದರಿಂದ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಿಲ್ಲೆಯ ಚಿಂತಾಮಣಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಉದ್ಘಾಟನೆ ಹಾಗೂ ಶ್ರೀರಾಮಮಂದಿರ ನಿರ್ಮಾಣ ಪ್ರಯುಕ್ತ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.
ಶ್ರೀರಾಮಚಂದ್ರನ ಅವತಾರ ದಶಾವತಾರಗಳಲ್ಲಿ ವಿಶೇಷವಾಗಿದೆ. ಈ ಭೂಮಿ ಇರುವವರೆಗೂ ಶ್ರೀರಾಮನ ಕಥೆ ಆದರ್ಶ ಮತ್ತು ಪ್ರಸ್ತುತವಾಗಿರುತ್ತದೆ. ಶ್ರೀರಾಮ ಸೀತಾಮಾತೆಯನ್ನು ಕರೆತರಬೇಕಾದರೆ ವಾನರರು ಸಹಾಯ ಮಾಡಿದ್ದರು. ಶಿವಾಜಿ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಜನರು ಕೈ ಜೋಡಿಸಿದರು. ಅದೇ ರೀತಿ ಶ್ರೀರಾಮನ ದೇಗುಲ ನಿರ್ಮಿಸಲು ದೇಶದ ಮೂಲೆಮೂಲೆಗಳಲ್ಲಿರುವ ಹಿಂದೂಗಳು ಜೊತೆಯಾಗಿದ್ದಾರೆ. ಈ ಕಾರ್ಯದಲ್ಲಿ ನಾನು ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಶ್ರೀರಾಮ ಆದರ್ಶದ ಪ್ರತಿರೂಪ ಪುತ್ರ, ಸಹೋದರ, ಪತಿಯಾಗಿ ಹೇಗೆ ಇರಬೇಕು ಎಂಬುದನ್ನು ಶ್ರೀರಾಮನನ್ನು ನೋಡಿ ಕಲಿಯಬಹುದು ಇಂತಹ ಮಹಾನ್ ಪುರುಷನ ದೇಗುಲ ನಿರ್ಮಾಣಕ್ಕೆ ಅನೇಕ ಸಂತರು, ಸ್ವಯಂಸೇವಕರು ಹೋರಾಟ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದ್ದು, ಆಂದೋಲನದಂತೆ ನಡೆಯಬೇಕು. ಕೈಲಾಸನಾಥ ನೋಡುವ ಆಸೆಯಂತೆ ಮುಂದಿನ ದಿನಗಳಲ್ಲಿ ಅಯೋಧ್ಯೆಯ ಬಗ್ಗೆ ಆ ರೀತಿಯ ಭಾವನೆ ಬೆಳೆಯಲಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರ್ ಎಸ್ ಎಸ್ ಬಲವಾಗಿರುವಂತೆ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಸಂಘಟನೆ ಬಲವಾಗಬೇಕಿದೆ. ಕೋವಿಡ್ ಮಹಾಮಾರಿ ಬಂದಾಗ ಆರ್ ಎಸ್ ಎಸ್ ಸ್ವಯಂಸೇವಕರು ಮನೆಮನೆಗೆ ತೆರಳಿ ನೆರವು ನೀಡಿದ್ದರು. ಆರ್ ಎಸ್ಎಸ್ ನ ಶಿಸ್ತು, ಸಂಯಮ ದೇಶಪ್ರೇಮವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.