ತುಮಕೂರು (ಗ್ರಾಮಾಂತರ): ಮೂವರು ಉಪಮುಖ್ಯಮಂತ್ರಿ ಆಗಬೇಕು ಎಂಬ ನನ್ನ ನಿರಂತರ ವಾದ ಇದ್ದೇ ಇದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಹೀಗಾಗಿ 3 ಡಿಸಿಎಂ ಬೇಕು. ಲೋಕಸಭಾ ಚುನಾವಣೆ ಇದ್ದಿದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನಿರಲು ಹೇಳಿದ್ದರು. ಹೀಗಾಗಿ ಇಷ್ಟು ದಿನ ಸುಮ್ಮನಿದ್ದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಸದ್ಯದಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೆ ಖುದ್ದಾಗಿ ಭೇಟಿ ಮಾಡಿ ಈ ವಿಚಾರ ಕುರಿತು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ, ಸಿಎಂ ಆಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರಾಜಣ್ಣ, ಖರ್ಗೆ ಅವರು ಸಿಎಂ ಆಗಬೇಕೆಂದು ಆಪೇಕ್ಷೆ ಪಡೋದನ್ನು ಯಾರೂ ಅಡ್ಡಿಪಡಿಸೋಕೆ ಆಗಲ್ಲ. ಯಾರೂ ತಪ್ಪಿಸೋಕೂ ಆಗಲ್ಲ. ಸಿಎಂ ಆಗೋ ಸಾಧ್ಯತೆ ಇದ್ದರೆ, ಖರ್ಗೆ ಆಗಲೇ ಆಗುತ್ತಿದ್ದರು. ಈಗ ಆ ಲಕ್ಷಣ ಇಲ್ಲ ಎಂದರು.
ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡ್ತಾರಾ? ಮಾಡಿದ್ರೆ ಮಾಡಲಿ. ನಾನು ಯಾವಾಗಲೂ ಕೇಳಿರಲಿಲ್ಲ. ವಾಪಸ್ ತಗೊಂಡ್ರೆ ವಾಪಸ್ ತಗೊಳ್ಳಲಿ. ನಾನು ರಾಜಕೀಯದ ಅಧಿಕಾರಕ್ಕಾಗಿ ಆಸೆ ಪಡೋನಲ್ಲ ಎಂದು ರಾಜಣ್ಣ ಹೇಳಿದರು.