ಹುಬ್ಬಳ್ಳಿ: ಉದ್ಯಮ ಪ್ರಸ್ತಾವನೆ ಹಾಗೂ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿಯೇ ಶೇ.41 ಪಾಲು ಹೊಂದುವ ಮೂಲಕ ರಾಜ್ಯ ನಂಬರ್ ಒನ್ ಪಟ್ಟ ಪಡೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಶನಿವಾರ ಆಯೋಜಿಸಿದ್ದ ನೂತನ ಕೈಗಾರಿಕಾ ನೀತಿ ಮತ್ತು ಹೂಡಿಕೆ ಅವಕಾಶಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊರಾನಾ ನಂತರದಲ್ಲಿ ದೇಶದಲ್ಲಿ 20-25 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ಅದರಲ್ಲಿ 1,500 ಕೋಟಿ ಪ್ರಸ್ತಾವನೆ, 3,500 ಕೋಟಿ ಬಂಡವಾಳ ಸೇರಿ ಒಟ್ಟು 5,000 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ದೇಶದಲ್ಲಿ ಇತಿಹಾಸದಲ್ಲಿ ರಾಜ್ಯದಲ್ಲಿ ಹೂಡಿಕೆ ಆಗುತ್ತಿರುವ ಅತಿದೊಡ್ಡ ಪ್ರಮಾಣದ ಹೂಡಿಕೆಯಾಗಿದೆ ಎಂದರು.
ಇಲೆಕ್ಟ್ರಿಕ್ ವಾಹನ ತಯಾರಿಕೆ ಘಟಕಕ್ಕೆ ರಾಜೇಶ ಮೆಹ್ತಾ ಕಂಪೆನಿ ಮುಂದಾಗಿದೆ. ಉದ್ಯಮ ವಲಯ ಅಭಿವೃದ್ಧಿ ನಿಟ್ಟಿನಲ್ಲಿ ಶೇ.30ರಷ್ಟು ನಿವೇಶನ ಎಂಎಸ್ ಎಂಇಗೆ ಮೀಸಲಿಡಲಾಗಿದೆ. ಇತ್ತೀಚೆಗೆ ತಾವು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀತಿ ಆಯೋಗವನ್ನು ಭೇಟಿ ಮಾಡಿದ್ದು, ತುಮಕೂರು ಬಳಿ 1,000 ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ-ಮುಂಬಯಿ ಆರ್ಥಿಕ ಕಾರಿಡಾರ್‌ಗೆ 4-5 ಸಾವಿರ ಎಕರೆ ಭೂಮಿ ಸ್ವಾ ಧೀನಕ್ಕೆ ಹೇಳಲಾಗಿತ್ತು. ಅದರಂತೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ಪ್ರತಿ ತಿಂಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಉದ್ಯಮ ಪ್ರಸ್ತಾವನೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಏಕಸ್ ಕಂಪೆನಿಗೆ 358 ಎಕರೆ ನೀಡಲಾಗಿದೆ. ಉದ್ಯೋಗ ನೀತಿಯಲ್ಲಿ ಟಿ-2, ಟಿ-3 ನಗರಗಳಿಗೆ ಒತ್ತು ನೀಡಲಾಗಿದೆ. ಇದರಿಂದ ಹಿಂದುಳಿದ, ಗ್ರಾಮೀಣ ಪ್ರದೇಶದ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಎಂ.ಟಿ. ಸಾಗರ ಉದ್ಯಮ ವಲಯ ಸ್ಟಾರ್ಟ್ ಆಗಿದೆ. ಉದ್ಯಮ ಜಾಗದ ಬೇಡಿಕೆ ಹೆಚ್ಚುತ್ತಿದೆ. ಶೀಘ್ರವೇ ಉದ್ಘಾಟಿಸಲಾಗುವುದು ಎಂದರು.
ಪಾಲಿಕೆ ಆಸ್ತಿಕರ ಬಾಕಿ ಹಾಗೂ ಗಾಮಗಟ್ಟಿ ನಿವೇಶನಗಳಿಗೆ ಹೆಚ್ಚುವರಿಹಣ ಪಡೆಯುತ್ತಿರುವ ಬಗ್ಗೆ ಫೆ. 19ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ನೀವು ಬನ್ನಿ, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡೋಣ. ನಿವೇಶನ ಹಂಚಿಕೆಯಾದ ಮೇಲೆ ಗರಿಷ್ಠ ಶೇ.20 ದರ ಹೆಚ್ಚಳವಾಗಬಾರದು. ತಾರಿಹಾಳ ಕೈಗಾರಿಕಾ ವಲಯವನ್ನು ಟೌನ್‌ಶಿಪ್ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಇಂತಹ 5-6 ಟೌನ್‌ಶಿಪ್ ಗಳು ಬರುತ್ತವೆ ಎಂದು ಹೇಳಿದರು.
ಇದನ್ನೂ ಓದಿ :ಸಿದ್ಧಾಂತ ಹೆಸರಲ್ಲಿ ಅಡ್ಡ ಗೋಡೆ ಕಟ್ಟಬೇಡಿ
ಹುಬ್ಬಳ್ಳಿ-ಧಾರವಾಡದಲ್ಲಿ ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಉದ್ಯಮ ಆಕರ್ಷಣೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. 2020ರ ಫೆ. 14ರಂದು ಹೂಡಿಕೆದಾರರ ಸಮಾವೇಶ ಮಾಡಿದ್ದಕ್ಕೆ ಉತ್ತಮ ಸ್ಪಂದನೆ ಬಂದಿದ್ದು, ಬೀದರನ ಕಡೆಚೂರಿನಲ್ಲಿ ಹೈದರಾಬಾದ್‌ನ ಅನೇಕ ಔಷಧ ತಯಾರಿಕೆ ಕಂಪೆನಿಗಳು ಆಗಮಿಸುತ್ತಿದ್ದು, ಸುಮಾರು 70ಕ್ಕೂ ಹೆಚ್ಚು ಕಂಪೆನಿಗಳೂ ಆಸಕ್ತಿ ತೋರಿವೆ. ಕಡೆಚೂರಿನಲ್ಲಿಯೇ ಸುಮಾರು 1,000 ಎಕರೆಯಲ್ಲಿ ಫಾರ್ಮಾ ಪಾರ್ಕ್ ಮಾಡಲು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಮಾಡಿದ್ದು, ಇದು ದೊರೆಯುವ ವಿಶ್ವಾಸವಿದೆ ಎಂದರು.