ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಿಂದ ಯಾವುದೇ ಸೂಚನೆ ಬಂದಿಲ್ಲ. ಸಿಎಂ ಹುದ್ದೆ ಖಾಲಿ ಇಲ್ಲ. ಸದ್ಯ ಈ ವಿಷಯ ಅಪ್ರಸ್ತುತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿಂದು (ಜು.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ಯಾವ ನಿರ್ಧಾರ ಏನೆಂಬುದು ನಮಗೆ ಗೊತ್ತಿಲ್ಲ ಮತ್ತು ಈ ಬಗ್ಗೆ ಯಡಿಯೂರಪ್ಪ ಅವರಿಗೂ ಅವರಿಂದ ಸೂಚನೆ ಬಂದಂತಿಲ್ಲ. ಅವರ ಸೂಚನೆಯಂತೆ ನಡೆದುಕೊಳ್ಳುವೆ ಎಂದು ಮುಖ್ಯಮಂತ್ರಿ ಸಹ ಹೇಳಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯ ಕುರಿತು ಚರ್ಚಿಸಿದ್ದಾರೆ ಹಾಗೂ ನಾನು ಕೇಶವ ಕುಂಜಕ್ಕೆ ಭೇಟಿ ನೀಡಿದ್ದರ ಬಗ್ಗೆ ಹೆಚ್ಚಿನ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾನು ಕೇಶವ ಕುಂಜಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ. ನಾವೇನು ಪಾಕಿಸ್ತಾನ ಮತ್ತು ಇಂಡಿಯಾ ಏನು? ಎಂದರು.
ಪಕ್ಷದಲ್ಲಿ ಗೊಂದಲಗಳಿರುವುದು ಸಾಮಾನ್ಯ. ಅದು ಆದಷ್ಟು ಬೇಗನೆ ನಿವಾರಣೆ ಆಗುತ್ತವೆ. ಹಾಗಂತ ಯಾವುದೇ ಅಭಿವೃದ್ಧಿ ಕಾರ್ಯಗಳು ಮತ್ತು ಸರ್ಕಾರ ಮಟ್ಟದಲ್ಲಿನ ಕೆಲಸಗಳು ನಿಂತಿಲ್ಲ.
75 ವರ್ಷ ಮೇಲ್ಪಟ್ಟವರು ರಾಜಕಾರಣದ ಯಾವುದೇ ಉನ್ನತ ಹುದ್ದೆಯಲ್ಲಿರಬಾರದು ಎಂದು ನಮ್ಮ ಬಿಜೆಪಿ ಸಂವಿಧಾನದಲ್ಲಿ ಇಲ್ಲ. ಯಡಿಯೂರಪ್ಪ ಅವರು 75 ವಯಸ್ಸು ಮೀರಿದ ಮೇಲೆಯೇ ಸಿಎಂ ಆಗಿದ್ದಾರೆ ಎಂದರು.